ಉದ್ಯೋಗಿಗಳ ಮನೋಬಲ ಹೆಚ್ಚಿಸಿದ ಬೆಂಗಳೂರು ಮೂಲದ ಜಿ 7 ಸಿಆರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್
ಬೆಂಗಳೂರು, ಜುಲೈ 26: ಈ ವರ್ಷದ ಆರಂಭದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗ ಬಡಿದ ನಂತರ ವಿಶ್ವಾದ್ಯಂತ ಅನೇಕ ಕಂಪನಿಗಳು ತಮ್ಮತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದರು. ಆದರೆ ಲಾಕ್ ಡೌನ್ ತೆರವಿನ ಬಳಿಕ ಕೆಲವರು ತಮ್ಮ ಕಚೇರಿಗಳಿಗೆ ಮರಳಿದರೂ, ಹೆಚ್ಚಿನ ಸಂಖ್ಯೆಯ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೊರೊನ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಯನ್ನು ಬುಡಮೇಲು ಮಾಡಿದ್ದಲ್ಲದೆ, ಉದ್ಯೋಗಿಗಳ ವೇತನ ಕಡಿತಕ್ಕೂ ಕಾರಣವಾಗಿದೆ. ಈತನ್ಮಧ್ಯ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದೂ ದಿನಂಪ್ರತಿ ಕೇಳುತ್ತಿದ್ದೇವೆ.
ಇಂತಹ ಸಮಯದಲ್ಲಿ ಬೆಂಗಳೂರು ಮೂಲದ ಜಿ 7 ಸಿಆರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅನೇಕ ಪ್ರಯೋಜನಗಳನ್ನು ನೀಡುವುದರ ಜೊತೆಯಲ್ಲಿ, ಪ್ರತಿ ಉದ್ಯೋಗಿಗಳಿಗೆ ವಾರ್ಷಿಕ ಬೋನಸ್ ನೀಡುತ್ತಿದೆ.
ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಏಪ್ರಿಲ್ 2020 ರಲ್ಲಿ ಸಂಬಂಧಿಸಿದಂತೆ ಉದ್ಯೋಗಿಗಳಿಗೆ ವಾರ್ಷಿಕ ಬೋನಸ್ ಪಾವತಿಸಿರುವುದನ್ನು ಬೆಂಗಳೂರು ಮೂಲದ ಜಿ 7 ಸಿಆರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಖಚಿತಪಡಿಸಿದೆ.
ಏನೆಲ್ಲಾ ಬದಲಾವಣೆ :
ಕಂಪನಿಯು ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಿಗೆ 10 ದಿನಗಳವರೆಗೆ ವೇತನ ದಿನಾಂಕವನ್ನು ಮುಂದಕ್ಕೆ ತಂದಿತು.
ಮನೆಯಲ್ಲಿ ಸೂಕ್ತವಾದ ಕಚೇರಿ ತರಹದ ಕಾರ್ಯಕ್ಷೇತ್ರವನ್ನು ನಿರ್ಮಿಸಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಂಪನಿಯು ತನ್ನ ಎಲ್ಲಾ ಉದ್ಯೋಗಿಗಳಿಗೆ 1,800 ರೂ.ಗಳ ಮನೆಭತ್ಯೆಯನ್ನು ಘೋಷಿಸಿದೆ.
ಇನ್ನು ಜಿ 7 ಸಂಸ್ಥೆ ತನ್ನ ಉದ್ಯೋಗಿಗಳಿಗೆ ಮನೆಯಲ್ಲಿ ಆರಾಮದಾಯಕವಾದ ಕುರ್ಚಿಗಳನ್ನು ಸಹ ತಲುಪಿಸುತ್ತಿದೆ.
ಇದರ ಜೊತೆಯಲ್ಲಿ ತನ್ನ ಎಲ್ಲಾ ಉದ್ಯೋಗಿಗಳ ಇಂಟರ್ನೆಟ್ ಬಿಲ್‌ಗಳನ್ನು ಸಹ ಮರುಪಾವತಿಸುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಕೊರೋನವೈರಸ್ ನಿಂದ ಯಾವುದೇ ಉದ್ಯೋಗಿಗಳಿಗೆ ಆಸ್ಪತ್ರೆಗೆ ದಾಖಲು ಮಾಡುವ ವೆಚ್ಚವಾಗಿ 1 ಲಕ್ಷ ರೂ.ವರೆಗೆ ಪ್ರಯೋಜನಗಳನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಇದು ಕಂಪನಿಯು ತನ್ನ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡುವ ಆರೋಗ್ಯ ವಿಮೆಯ ಭಾಗವಲ್ಲ.
ನಮ್ಮ ಉದ್ಯೋಗಿಗಳ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ, ನಮ್ಮ 100% ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ನಮ್ಮ ಜನರು ಕಚೇರಿಗೆ ಬರುವುದು ಸುರಕ್ಷಿತವಾಗುವವರೆಗೆ ಈಗ ಪ್ರಸ್ತುತ ಜಾರಿಯಲ್ಲಿರು ವರ್ಕ್ ಫ್ರಮ್ ಹೋಂ ಮುಂದುವರಿಯಲಿದೆ. ನಾವು ಸಂಘಟನೆಯಾಗಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಜನರ ಹಿತ ದೃಷ್ಟಿಯಿಂದ ಕೂಡಿರುತ್ತೆ ಎಂದು ಜಿ 7 ಸಿಆರ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಕ್ರಿಸ್ಟೋಫರ್ ರಿಚರ್ಡ್ ಹೇಳಿದರು.