ನವದೆಹಲಿ : ಚೀನಾ ಜೊತೆಗಿನ ಗಡಿ ಸಮಸ್ಯೆಗಳ ಕುರಿತು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ಟ್ವಿಟ್ಟರ್ ನಲ್ಲಿ ‘ಚೀನಾ ಒಳನುಸುಳುವಿಕೆ ಬಗ್ಗೆ ಸುಳ್ಳು ಹೇಳುವವರು ನಿಜವಾದ ದೇಶಭಕ್ತರಲ್ಲ ಎಂದು ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಹುಲ್, “ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ಬಗೆಗಿನ ಸತ್ಯ ಮರೆಮಾಚಿ ಭಾರತದ ಭೂಮಿಯನ್ನು ಕಬಳಿಸಲು ಚೀನಾಗೆ ಅವಕಾಶ ನೀಡುವುದು ರಾಷ್ಟ್ರ ವಿರೋಧಿ ನಡವಳಿಕೆಯಾಗಿದೆ. ಅದನ್ನು ಜನರ ಗಮನಕ್ಕೆ ತರುವುದೇ ನಿಜವಾದ ದೇಶಭಕ್ತಿ” ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ವಿಡಿಯೋದಲ್ಲಿ ” ಒಬ್ಬ ಭಾರತೀಯನಾಗಿ ನನ್ನ ಪ್ರಥಮ ಆದ್ಯತೆ ನನ್ನ ರಾಷ್ಟ್ರ ಮತ್ತು ಅದರ ಜನರು” ಎಂದಿರುವ ರಾಹುಲ್ ಗಾಂಧಿ, ” ಚೀನಾ ನಮ್ಮ ಭೂಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಇದು ನನ್ನ ರಕ್ತ ಕುದಿಯುವಂತೆ ಮಾಡುತ್ತಿದೆ. ಬೇರೊಂದು ರಾಷ್ಟ್ರ ಅಷ್ಟೊಂದು ಸುಲಭವಾಗಿ ಹೇಗೆ ನಮ್ಮ ಭೂಪ್ರದೇಶಕ್ಕೆ ನುಗ್ಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.
ಚೀನಾ ಭಾರತದ ಪ್ರದೇಶವನ್ನು ಆಕ್ರಮಿಸಿರುವ ಬಗ್ಗೆ ನಾನು ಉಪಗ್ರಹದ ಫೋಟೊಗಳನ್ನು ನೋಡಿ ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಮಾಜಿ ಸೇನಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನೀವು ನಾನು ಮೌನವಾಗಿರಬೇಕು ಮತ್ತು ನನ್ನ ಜನರಿಗೆ ಸುಳ್ಳು ಹೇಳಬೇಕೆಂದು ಬಯಸಬಹುದು. ಆದರೆ ನಾನು ಸುಳ್ಳು ಹೇಳುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.








