ಚಿಕ್ಕಬಳ್ಳಾಪುರ : ರಾಜಸ್ತಾನದ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ಉಳಿಸಿ ಎಂದು ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಸಚಿವ ಡಾ.ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ಏಳು ಬೀಳುಗಳ ನಡುವೆ ಸರ್ಕಾರ ಯಶಸ್ವಿ ಒಂದು ವರ್ಷ ಪೂರೈಸಿದೆ. ರಾಜ್ಯದ ಪ್ರಗತಿ ಸಾಧಿಸಲು ರಾಜಕೀಯ ಸ್ಥಿರತೆ ಮುಖ್ಯ, ನಮ್ಮಲ್ಲಿದೆ. ಸಿಎಂ ಕ್ರಿಯಾಶೀಲ, ಬದ್ಧತೆಯಿಂದ ಒಂದು ವರ್ಷ ಪೂರೈಸುತ್ತಿದೆ. ಸವಾಲುಗಳ ವರ್ಷ ಪರಿಹಾರ ಸ್ಪರ್ಷ, ಕಾಯಕವೇ ಕೈಲಾಸ, ಬಸವೇಶ್ವರ ವಚನದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದ್ದೇವೆ ಎಂದು ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ 17 ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಜನ ವಿರೋಧಿ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ ಬಳಿಕವೇ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸ್ಥಿರ ಆಡಳಿತ ನೀಡಲು ಸಾಧ್ಯವಾಗಿದೆ. ನಾವು ನಂಬಿದ ಆಶಯಗಳಿಗೆ ಮೈತ್ರಿ ಸರ್ಕಾರದಲ್ಲಿ ಒತ್ತು ಸಿಗಲಿಲ್ಲ. ಆದ್ದರಿಂದ ನಾವು 17 ಮಂದಿ ರಾಜೀನಾಮೆ ನೀಡಿದೆವು. ಜನ ಕೂಡ ಮೈತ್ರಿ ಸರ್ಕಾರದ ವಿರುದ್ದ ಬೇಸತ್ತಿದ್ದರು. 15 ಜನರಲ್ಲಿ 12 ಮಂದಿಯನ್ನು ಜನರು ಗೆಲ್ಲಿಸಿದರು. ಅದರಲ್ಲಿ ಹತ್ತು ಮಂದಿ ಮಂತ್ರಿಗಳಾಗಿದ್ದೇವೆ ಎಂದರು








