ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಇಂದು ಬರೋಬ್ಬರಿ 5536 ಮಂದಿಗೆ ಪಾಸಿಟಿವ್ ಬಂದಿದೆ. ಇಂದೂ ಕೂಡ ಸಾವಿನ ಸರಣಿ ಮುಂದುವರೆದಿದ್ದು, 102 ಮಂದಿ ಹೆಮ್ಮಾರಿಗೆ ಉಸಿರು ಚೆಲ್ಲಿದ್ದಾರೆ. ಇದರೊಂದಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2055ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 5536 ಹೊಸ ಪ್ರಕರಣಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 7001ಕ್ಕೆ ಏರಿಕೆಯಾಗಿದೆ. ಇಂದು 2819 ಮಂದಿ ಆಸ್ಪತ್ರೆಗಳಿಂದ ಡಿಶ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 40,504 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 64,434 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1898 ಮಂದಿ ಕೋವಿಡ್ ಪಾಸಿಟಿವ್ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 48,821ಗೆ ಏರಿಕೆಯಾಗಿದೆ. ಇದುವರೆಗೆ 12,761 ಮಂದಿ ಡಿಶ್ಚಾರ್ಜ್ ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 35,102ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಕೊರೊನಾದಿಂದ ಇಂದು 40 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 957ಕ್ಕೆ ಏರಿಕೆಯಾಗಿದೆ.
ಬಳ್ಳಾರಿಯಲ್ಲಿ 452 ಮಂದಿಗೆ ಕೊರೊನಾ ಬಂದಿದ್ದರೆ, ಕಲಬುರಗಿಯಲ್ಲಿ ಇಂದು 283 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದರೆ, 6 ಮಂದಿ ಸಾವನ್ನಪ್ಪಿದ್ದಾರೆ. ಬೆಳಗಾವಿಯಲ್ಲಿ 228 ಮಂದಿಗೆ ಪಾಸಿಟಿವ್ ಬಂದಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 220 ಮಂದಿಗೆ ಹೆಮ್ಮಾರಿ ವಕ್ಕರಿಸಿದ್ದರೆ, 123 ಮಂದಿ ಬಲಿಯಾಗಿದ್ದಾರೆ.
ಹೆಚ್ಚು ಸೋಂಕಿತರಿರುವ ಜಿಲ್ಲೆಗಳು
ಬೆಂಗಳೂರು ನಗರ-1898
ಬಳ್ಳಾರಿ-452
ಕಲಬುರಗಿ-283
ಬೆಳಗಾವಿ-228
ಮೈಸೂರು-220
ತುಮಕೂರು-207
ಕೋಲಾರ-174
ದಕ್ಷಿಣ ಕನ್ನಡ-173
ಧಾರವಾಡ-173
ವಿಜಯಪುರ-153
ಕೊಪ್ಪಳ-144
ದಾವಣಗೆರೆ-135
ಬಾಗಲಕೋಟೆ-115
ಉಡುಪಿ-109
ಹಾಸನ-108
ಬೆಂಗಳೂರು ಗ್ರಾಮಾಂತರ-107
ರಾಮನಗರ-101
ಕರಾವಳಿಯಲ್ಲಿ ಕೊರೊನಾ ರಣಕೇಕೆ..!
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ರಣಕೇಕೆ ಹಾಕಿದೆ. ಇಂದು 173 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 4 ಮಂದಿ ಮಹಾಮಾರಿಗೆ ಮೃತಪಟ್ಟಿದ್ದು, 91 ಮಂದಿಗೆ ವೈರಲ್ ಜ್ವರದಂತಹ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಆದರೆ, 38 ಮಂದಿಗೆ ಸಂಪರ್ಕವೇ ಪತ್ತೆಯಾಗದೇ ಪಾಸಿಟಿವ್ ಬಂದಿದ್ದು, 22 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.








