ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ನಡುವಿನ ರಾಜಕೀಯ ಜಟಾಪಟಿ ಈಗ ಅತ್ಯಂತ ವೈಯಕ್ತಿಕ ಮತ್ತು ಸ್ಫೋಟಕ ಹಂತಕ್ಕೆ ತಲುಪಿದೆ. ಕುಮಾರಸ್ವಾಮಿ ಅವರು ಕೇವಲ ಅಧಿಕಾರಿಗಳು ಅಥವಾ ಸ್ವಾಮೀಜಿಗಳ ಫೋನ್ ಮಾತ್ರವಲ್ಲ, ತಮ್ಮ ಸ್ವಂತ ಪತ್ನಿಯ ಫೋನ್ ಅನ್ನೂ ಟ್ಯಾಪಿಂಗ್ ಮಾಡಿಸಿದ್ದರು ಎಂದು ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಹೆಂಡತಿಯ ಮೇಲೆಯೇ ನಂಬಿಕೆ ಇಲ್ಲದ ವ್ಯಕ್ತಿ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಕುಮಾರಸ್ವಾಮಿ ಅವರಿಗೆ ತಮ್ಮ ಪತ್ನಿಯ ಮೇಲೆಯೇ ನಂಬಿಕೆ ಇಲ್ಲ. ವರ್ಗಾವಣೆ ವಿಚಾರದಲ್ಲಿ ಪತ್ನಿ ಯಾರೊಂದಿಗಾದರೂ ಮಾತನಾಡುತ್ತಾರೋ ಎಂಬ ಸಂಶಯದಿಂದ ಅವರ ಫೋನ್ ಟ್ಯಾಪ್ ಮಾಡಿಸಿದ್ದರು. ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಮಾಡಿಸಿದ ಇತಿಹಾಸವಿರುವ ಕುಮಾರಸ್ವಾಮಿ ಈಗ ಸಮಾಜಕ್ಕೆ ಬುದ್ಧಿ ಹೇಳುತ್ತಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು, ಬೇಕಿದ್ದರೆ ಅದನ್ನು ಬಿಡುಗಡೆ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ನನ್ನನ್ನು ಶೂಟ್ ಮಾಡಲಿ ಇಲ್ಲವೇ ಅವರೇ ಮಾಡಿಕೊಳ್ಳಲಿ
ತಮ್ಮ ಮೇಲೆ ಕುಮಾರಸ್ವಾಮಿ ಮಾಡಿರುವ ಗನ್ ಪಾಯಿಂಟ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಾಲಕೃಷ್ಣ, ನನ್ನ ಬಳಿ ಯಾವುದೇ ಗನ್ ಇಲ್ಲ ಮತ್ತು ಲೈಸೆನ್ಸ್ ಕೂಡ ಇಲ್ಲ. ಕುಮಾರಸ್ವಾಮಿ ಅವರು ಆ ಗನ್ ಅನ್ನು ತರಲಿ. ಒಂದೋ ಆ ಗನ್ ನಿಂದ ನನ್ನನ್ನು ಶೂಟ್ ಮಾಡಲಿ ಅಥವಾ ಅವರೇ ಶೂಟ್ ಮಾಡಿಕೊಳ್ಳಲಿ. ಇಂತಹ ಉಡಾಫೆ ಮಾತುಗಳನ್ನು ಆಡಲು ಅವರಿಗೆ ನಾಚಿಕೆಯಾಗಬೇಕು. ನನ್ನ ರಾಜಕೀಯ ಜೀವನದಲ್ಲಿ ಕತ್ತಿ ತೋರಿಸುವ ಅಥವಾ ಗನ್ ತೋರಿಸುವ ಸಂಸ್ಕೃತಿ ಇಲ್ಲ. ತಾವು ಮಾಡಿದ ಆರೋಪವನ್ನು ಅವರು ಸಾಬೀತುಪಡಿಸಲಿ ಅಥವಾ ಕ್ಷಮೆಯಾಚಿಸಲಿ ಎಂದು ಗುಡುಗಿದರು.
ಮಗನ ಬೆಳವಣಿಗೆಯನ್ನೂ ಸಹಿಸದ ತಂದೆ
ಕುಮಾರಸ್ವಾಮಿ ವಿರುದ್ಧ ಮತ್ತೊಂದು ವೈಯಕ್ತಿಕ ವಾಗ್ದಾಳಿ ನಡೆಸಿದ ಬಾಲಕೃಷ್ಣ, ಕುಮಾರಸ್ವಾಮಿ ಅವರಿಗೆ ತಮ್ಮ ಮಗನ ರಾಜಕೀಯ ಬೆಳವಣಿಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಮನಸ್ಸು ಮಾಡಿದ್ದರೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸಂಸದನನ್ನಾಗಿ ಮಾಡಬಹುದಿತ್ತು. ಆದರೆ ಸ್ವಂತ ಮಗನ ಏಳಿಗೆಯನ್ನೂ ಇಷ್ಟಪಡದ ಮನಸ್ಥಿತಿ ಅವರದ್ದು ಎಂದು ಲೇವಡಿ ಮಾಡಿದರು. ಬಾಲಕೃಷ್ಣ ಅವರ ಈ ಸ್ಫೋಟಕ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಸಮರ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿವೆ.








