ಸುದ್ದಿ ವಿಶ್ಲೇಷಣೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ಹಲವು ಸಂಕಷ್ಟಗಳ ನಡುವೆ ಸೋಮವಾರಕ್ಕೆ ಒಂದು ವರ್ಷದ ಸಂಭ್ರಮ ಆಚರಿಸಿಕೊಂಡಿದೆ. ಆದರೆ, ಈ ಸಂಭ್ರಮಕ್ಕೆ ಬಿಜೆಪಿ ಹೈಕಮಾಂಡ್ ಕೊಳ್ಳಿ ಇಟ್ಟಿತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಸದ್ಯ ದೆಹಲಿಯಲ್ಲಿರುವ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಕೂರಿಸಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆ ಎನ್ನಲಾಗಿದೆ.
ಆದರೆ, ಬಿಜೆಪಿ ಹೈಕಮಾಂಡ್ ಅಂದು ಕೊಂಡಷ್ಟು ಸುಲಭದ ಕೆಲಸ ಅಲ್ಲ. ಬಿಎಸ್‍ವೈ ಟಚ್ ಮಾಡುವುದು ಜೇನಿನ ಗೂಡಿಗೆ ಕಲ್ಲು ಹೊಡೆದಂತೆ, ಉರಿವ ಬೆಂಕಿಗೆ ತುಪ್ಪ ಸುರಿದಂತೆ. 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್‍ವೈ ಅವರ ಸ್ಥಾನಕ್ಕೆ ಸದಾನಂದಗೌಡ ಅವರನ್ನು ಕೂರಿಸಲಾಯಿತು. ನಂತರ ಜಗದೀಶ್ ಶೆಟ್ಟರ್ ಸಿಎಂ ಆದರು.
ಆದರೆ, ಯಡಿಯೂರಪ್ಪ ಅವರನ್ನು ಕಡೆಗಣಿಸಿದ ಪರಿಣಾಮ ಏನಾಯಿತು ಎಂಬುದು ಬಿಜೆಪಿ ವರಿಷ್ಠರಿಗೂ ಗೊತ್ತು. ಬಿಜೆಪಿಗೆ ಸೆಡ್ಡು ಹೊಡೆದು ಹೊರಬಂದ ಯಡಿಯೂರಪ್ಪ, ಕೆಜೆಪಿ ಕಟ್ಟಿದ್ದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಕೇವಲ 40 ಸ್ಥಾನಕ್ಕೆ ಕುಸಿದು ಹೀನಾಯ ಸ್ಥಿತಿಗೆ ಬಂದು ನಿಂತಿತ್ತು. ಮತ್ತೆ ಬಿಜೆಪಿ ಪುಟಿದೇಳಲು ಸಾಧ್ಯವಾಗಿದ್ದೇ ಇದೇ ಯಡಿಯೂರಪ್ಪ ಅವರಿಂದ. ಬಿಜೆಪಿಗೆ ಮತ್ತೆ ಯಡಿಯೂರಪ್ಪ ವಾಪಾಸ್ ಬರುತ್ತಿದ್ದಂತೆ ಕಂಗಾಲಾಗಿದ್ದ ಬಿಜೆಪಿಯಲ್ಲಿ ಹೊಸ ಹುರುಪು ಬಂತು.
ಬಿಎಸ್‍ವೈ ನಂತರ ಮುಂದಿನ ನಾಯಕ ಯಾರು..!
ಯಡಿಯೂರಪ್ಪ ಅವರ ತಾಕತ್ತು ಬಿಜೆಪಿ ಹೈಕಮಾಂಡ್‍ಗೂ ಗೊತ್ತು. ಆದರೆ, ಯಡಿಯೂರಪ್ಪ ನಂತರ ಮುಂದಿನ ಬಿಜೆಪಿ ನಾಯಕರು ಯಾರು. ಅವರಷ್ಟು ಸಮರ್ಥವಾಗಿ ಪಕ್ಷವನ್ನು, ಮತಬ್ಯಾಂಕನ್ನು ಗಟ್ಟಿಯಾಗಿ ಇರಿಸಿಕೊಳ್ಳುವಂತಹ ನಾಯಕರಾರು ಎಂಬ ಚಿಂತನೆ ವರ್ಷದಿಂದಲೇ ನಡೆಯುತ್ತಿದೆ.
ಈ ನಡುವೆ, ಕಳೆದ ವರ್ಷದ ಸಂಪುಟ ವಿಸ್ತರಣೆ ವೇಳೆ ಅಥಣಿ ಕ್ಷೇತ್ರದಲ್ಲಿ ಸೋತಿದ್ದ ಲಕ್ಷ್ಮಣ್ ಸವಧಿಯನ್ನು ಡಿಸಿಎಂ ಮಾಡುವ ಮೂಲಕ ಬಿಜೆಪಿಯವರನ್ನೇ ದಂಗು ಬಡಿಸಿತ್ತು ಬಿಜೆಪಿ ಹೈಕಮಾಂಡ್‍ನ ಈ ನಡೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರ ಓಟಕ್ಕೆ ಬ್ರೇಕ್ ಹಾಕಲು ಲಕ್ಷ್ಮಣ್ ಸವಧಿಯನ್ನು ಡಿಸಿಎಂ ಮಾಡಲಾಗಿತ್ತು. ಇದರ ಹಿಂದೆ ಆರ್‍ಎಸ್‍ಎಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಇದ್ದಾರೆ ಎನ್ನುವುದು ಗೊತ್ತಿರುವ ಸಂಗತಿ.
ಆದರೆ, ಲಕ್ಷ್ಮಣ್ ಸವದಿ ಅವರನ್ನು ಮುಖ್ಯಮಂತ್ರಿ ಗಾದಿಗೆ ಕೂರಿಸುವಂತಹ ಗಟ್ಟಿ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಹೋಗಿದ್ದಾರೆಂಬುದು ಖುದ್ದು ಯಡಿಯೂರಪ್ಪ ಅವರಿಗೂ ಶಾಕ್ ಕೊಟ್ಟಿರಲೂಬಹುದು.
ಕಳೆದ ಕೆಲ ದಿನಗಳಿಂದ ಸಿಎಂ ಸ್ಥಾನ ಪಲ್ಲಟಕ್ಕೆ ಪಕ್ಷದೊಳಗೆ ಏನೇನೋ ನಡೆಯುತ್ತಿದೆ ಎಂಬುದು ಬಿಎಸ್‍ವೈ ಗಮನಕ್ಕೆ ಬಾರದೇ ಇಲ್ಲ. ಸರ್ಕಾರ ಬಂದು ಒಂದು ವರ್ಷವಾಗುತ್ತಿದ್ದಂತೆ ಈ ಊಹಾಪೂಗಳಿಗೆ ರೆಕ್ಕೆಪುಕ್ಕ ಹುಟ್ಟಿದ್ದು ಲಕ್ಷ್ಮಣ್ ಸವದಿ ಅಭಿಮಾನಿಗಳ ಫೇಸ್‍ಬುಕ್ ಪೋಸ್ಟ್. ಮುಂದಿನ ಸಿಎಂ ಲಕ್ಷ್ಮಣ್ ಸವದಿ ಎಂದು ಪೋಸ್ಟ್ ಹಾಕಿರುವುದು.
ಜೇನಿನಗೂಡಿಗೆ ಕಲ್ಲು ಹೊಡೆಯುತ್ತಾ ಬಿಜೆಪಿ..!
ಹಠಕ್ಕೆ ಬಿದ್ದವರಂತೆ ದೋಸ್ತಿ ಸರ್ಕಾರದ ವಿರುದ್ಧ ಆಪರೇಶನ್ ಕಮಲ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಯಡಿಯೂರಪ್ಪ ಅವರ ತಾಕತ್ತಿಗೆ ಹಿಡಿದ ಕನ್ನಡಿ. ಆದರೆ, ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಹೊರಟಿದೆ ಎಂಬ ಊಹಾಪೋಹಗಳು ಅಕ್ಷರಶಃ ಜೇನುಗೂಡಿನ ಕಲ್ಲು ಹೊಡೆದಂತೆ.
ಇದಕ್ಕೆಲ್ಲಾ ಪುಷ್ಠಿ ನೀಡಿದ್ದು ಸರ್ಕಾರ ಒಂದು ವರ್ಷದ ಆಡಳಿತ ಸಂಭ್ರಮದಲ್ಲಿರುವಾಗಲೇ ಡಿಸಿಎಂ ಲಕ್ಷ್ಮಣ್ ಸವದಿ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ನಾಯಕರ ಜತೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಡಲು ಯಡಿಯೂರಪ್ಪ ಹಾಗೂ ಸರ್ಕಾರ ಹರಸಾಹಸ ಪಡುತ್ತಿದ್ದರೆ, ಡಿಸಿಎಂ ಲಕ್ಷ್ಮಣ ಸವದಿ, ಇದಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ದೂರವೇ ಇದ್ದಾರೆ. ಡಿಸಿಎಂ ಆಗಿದ್ದರೂ ತವರು ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆ ಸಿಗದೆ ಜನರು ಪರದಾಡುತ್ತಿದ್ದರೂ ಲಕ್ಷ್ಮಣ್ ಸವದಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದೆಲ್ಲಾ ಬೆಳವಣಿಗೆಗಳು ಸವದಿ ಅವರು ಮುಂದಿನ ಕಾರ್ಯತಂತ್ರಕ್ಕಾಗಿ ವೇದಿಕೆ ಸಿದ್ಧಮಾಡಿಕೊಳ್ಳುತ್ತಿರುವುದು ಪ್ರಯತ್ನ ಇರಬಹುದೇ ಎಂಬುದಕ್ಕೆ ಹೌದು ಎನ್ನುವಂತೆ ಮಾಡಿದೆ.
ಬಿಎಸ್‍ವೈ ಶುಭ ಕೋರದ ಹೈಕಮಾಂಡ್..!
ಭೀಕರ ಪ್ರವಾಹದ ಬಳಿಕ ಕೊರೊನಾದಿಂದ ರಾಜ್ಯದ ಜನತೆ ಹೈರಾಣಾಗಿದ್ದು, ಪರಿಸ್ಥಿತಿ ನಿಭಾಯಿಸಲು 78ರ ಹರೆಯದಲ್ಲೂ ಯಡಿಯೂರಪ್ಪ ಯುವಕರನ್ನೂ ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆಯೂ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಒಂದು ವರ್ಷದ ಸಂಭ್ರಮ ಹಂಚಿಕೊಂಡ ಬಿಎಸ್‍ವೈಗೆ ಬಿಜೆಪಿ ಹೈಕಮಾಂಡ್ ನಾಯಕರಿಂದ ಂಯಾವುದೇ ಶುಭಾಷಗಳಾಗಲಿ, ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸುವ ಯಾವುದೇ ಪ್ರಯತ್ನವಾಗಲೀ ನಡೆದಿಲ್ಲ ಎನ್ನಲಾಗಿದೆ.
ಇದರ ಅರ್ಥ ಯಡಿಯೂರಪ್ಪ ಬಗ್ಗೆ ಹೈಕಮಾಂಡ್‍ನ ತಿರಸ್ಕಾರದ ಮನೋಭಾವವೂ ಇದ್ದಿರಬಹುದು ಎನ್ನಬಹುದೇನೋ. ಆದರೆ, ಯಡಿಯೂರಪ್ಪ ಮಾತ್ರ ಇದ್ಯಾವುದಕ್ಕೂ ತಲೆಕಡೆಸಿಕೊಂಡಂತೆ ಕಾಣುತ್ತಿಲ್ಲ. ತಮ್ಮ ದೈನಂದಿನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಲಕ್ಷ್ಮಣ್ ಸವದಿ ಬೆಂಬಲಿಗರು ಮುಂದಿನ ಸಿಎಂ ಎಂದು ಫೇಸ್‍ಬುಕ್‍ನಲ್ಲಿ ಹಾಕಿರುವುದು, ದೆಹಲಿ ಮಟ್ಟದಲ್ಲಿ ಸವದಿ ಕಾರ್ಯತಂತ್ರ ರೂಪಿಸಿರುವುದು, ಸಚಿವ ರಮೇಶ್ ಜಾರಕಿಹೊಳಿ ಅದೃಷ್ಟ ಇದ್ರೆ ಸಿಎಂ ಆಗಲಿ ಬಿಡಿ ಎಂದು ಹೇಳಿರುವುದು ಈ ಎಲ್ಲಾ ಬೆಳವಣಿಗೆಗಳ ಕೇಂದ್ರ ಬಿಂದುವಾಗಿದೆ. ಈ ಎಲ್ಲಾ ಬೆಳವಣಿಗೆಗಳು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.








