ನವದೆಹಲಿ: ಇದೇ ಜುಲೈ 31ರಂದು ದೇಶಾದ್ಯಂತ ಅನ್ಲಾಕ್-2.0 ಕೊನೆಗೊಳ್ಳಲಿದ್ದು, ಆಗಸ್ಟ್ 1ರಿಂದ 3.0 ಹೊಸ ಗೈಡ್ಲೈನ್ಸ್ನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
3.0 ಹೊಸ ಗೈಡ್ಲೈನ್ಸ್ನಲ್ಲಿ ಜಿಮ್ ಹಾಗೂ ಯೋಗ ಕ್ಲಾಸ್ಗಳಿಗೆ ಅನುಮತಿ ನೀಡಲಾಗಿದೆ. ಆಗಸ್ಟ್ 5ರಿಂದ ಯೋಗ ಸಂಸ್ಥೆಗಳು ಹಾಗೂ ಜಿಮ್ ಸೆಂಟರ್ಗಳು ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಈ ಎಲ್ಲಾ ಚಟುವಟಿಕೆಗಳು ಕಂಟೈನ್ಮೆಂಟ್ ಝೋನ್ ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಆರಂಭಿಸಲು ಅನುಮತಿಸಲಾಗಿದೆ.
ಇದೇ ವೇಳೆ, ಶಾಲಾ-ಕಾಲೇಜುಗಳು ಹಾಗೂ ಕೋಚಿಂಗ್ ಸೆಂಟರ್ಗಳನ್ನು ಆಗಸ್ಟ್ 31ರವರೆಗೆ ತೆರೆಯದಂತೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಅದೇಶ ಹೊರಡಿಸಿದೆ. ರಾತ್ರಿ ಕಫ್ರ್ಯೂವನ್ನು ತೆಗೆದು ಹಾಕಲಾಗಿದ್ದು, ರಾತ್ರಿ ವೇಳೆ ಜನರ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆಗಸ್ಟ್ 31ರವರೆಗೆ ಕಂಟೈನ್ಮೆಂಟ್ ಝೋನ್ನಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು, ಒಂದು ಕಡೆ ಹೆಚ್ಚು ಜನರು ಸೇರುವ ಸ್ವಿಮ್ಮಿಂಗ್ ಪೂಲ್, ಸಾಮಾಜಿಕ-ರಾಜಕೀಯ ಸಭೆ ಸಮಾರಂಭ, ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಜತೆಗೆ ಕಂಟೈನ್ಮೆಂಟ್ ಪ್ರದೇಶದಲ್ಲಿ ಮೆಟ್ರೋ, ಮಲ್ಟಿಪ್ಲೆಕ್ಸ್, ಥಿಯೇಟರ್ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ತೆರೆಯಲು ಒಪ್ಪಿಗೆ ನೀಡಿಲ್ಲ.
ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರದಿಂದ ಅನುಮತಿ ಸಿಗಬಹುದು ಎಂದು ಚಿತ್ರೋದ್ಯಮ ಹಾಗೂ ಥಿಯೇಟರ್, ಮಲ್ಟಿಪ್ಲೆಕ್ಸ್ಗಳ ಮಾಲೀಕರು ಭಾರಿ ನಿರೀಕ್ಷೆ ಹೊಂದಿದ್ದರು. ಆದರೆ, ದೇಶಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳನ್ನು ತೆರೆಯಲು ಒಪ್ಪಿಗೆ ಸೂಚಿಸಿಲ್ಲ.
ಈ ನಡುವೆ, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಸೇರಿದಂತೆ ಆರೋಗ್ಯ ಸಂಬಂಧಿತ ನಿಯಮಗಳನ್ನು ಅನುಸರಿಸಬೇಕು ಎಂದು ಗೃಹ ಸಚಿವಾಲಯದ ಗೈಡ್ಲೈನ್ಸ್ನಲ್ಲಿ ಸೂಚಿಸಲಾಗಿದೆ.








