ಕಜೆಯ ಕರೋನಾ ಔಷಧಿ, ಬಾಬಾ ರಾಮ್ ದೇವ್ ಮದ್ದು, ಅಲೋಪಥಿ ಲಾಭಿ, ಸರ್ಕಾರಗಳ ಗಢದ್ ನಿದ್ರೆ; ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ
ನಿಮಗೆ ಸಂತೋಷ್ ಗುರೂಜಿ ಗೊತ್ತಿರಬೇಕಲ್ಲವಾ? ಅವರು ಬೆಜುವಳ್ಳಿಯಲ್ಲಿ ಸನ್ಯಾಸಿ ಆಗುವ ಮೊದಲು ಪ್ರೊಫೇಷನಲ್ ಆಯುರ್ವೇದಿಕ್ ವೈದ್ಯರಾಗಿದ್ದರು. ನಿಮಗೆ ನೆನಪಿದ್ದರೇ ಟಿವಿ9 ನಂತಹ ಚಾನೆಲ್ ನಲ್ಲೂ ಬಂದು ಆಯುರ್ವೇದ, ವೇದಿಕ್ ಆಹಾರ, ಆಧ್ಯಾತ್ಮದ ಬಗ್ಗೆ ಆಗಾಗ ಮಾತಾಡುತ್ತಿದ್ದರು. ಅವರ ಮೇಲೆ ಆಮೇಲಾಮೇಲೆ ಆದ ಆರೋಪಗಳನ್ನು ಬದಿಗಿಟ್ಟು ನೋಡುವುದಾದರೇ ಅವರೊಬ್ಬ ಪ್ರೊಫೇಶನಲ್ ಆಯುರ್ವೇದಿಕ್ ಡಾಕ್ಟರ್ ಅನ್ನೋದನ್ನು ತೆಗೆದುಹಾಕಲು ಸಾಧ್ಯವಿಲ್ಲ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಅವರಿಂದ ಮದ್ದು ತೆಗೆದುಕೊಂಡು ಪರಿಹಾರ ಕಂಡುಕೊಂಡ ಸಾವಿರಾರು ಜನರಿದ್ದಾರೆ.
ಈಗ ವಿಷಯಕ್ಕೆ ಬರ್ತೀನಿ. ಇದೇ ಸಂತೋಷ್ ಗುರೂಜಿ, ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಸಂದರ್ಭದಲ್ಲಿ ತಾವು ಕರೋನಾ ನಿಯಂತ್ರಣಕ್ಕೆ ರೋಗಿಯ ದೇಹದ ಇಮ್ಯೂನಿಟಿ ಹೆಚ್ಚಿಸಿ ಕರೋನಾ ನಿಯಂತ್ರಿಸಲು ಪ್ರಯತ್ನಿಸುವುದಾಗಿಯೂ, ಕರೋನಾ ರೋಗಿಗಳ ಮೇಲೆ ತಮ್ಮ ಔಷಧ ಪ್ರಯೋಗಿಸಲು ಅನುಮತಿ ನೀಡುವಂತೆಯೂ ಸನ್ಮಾನ್ಯ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಅಲ್ಲಿ ಇಲ್ಲಿ ಹರಿದಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುತ್ತಾಡಿ ಸಂತೋಷ್ ಗುರೂಜಿಯವರ ಪೋಸ್ಟ್ ನನ್ನ ಮೊಬೈಲ್ ಗೆ ಬಂದಿದ್ದು ಮಾರ್ಚ್ 27ರಂದು. ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು ಮಾರ್ಚ್ 24ರಂದು.
ದೇಶಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆಯಾದ ತಕ್ಷಣವೇ ಸಂತೋಷ್ ಗುರೂಜಿ ಹೀಗೊಂದು ಮನವಿ ಮಾಡಿಕೊಂಡಿದ್ದರು. ಅವರು ಹೇಳಿದ್ದಿಷ್ಟು, “ವಾಸ, ತಾಲೀಚ್ಛತ್ರ, ಅಮೃತ, ವಂಶ, ಲೋಚನೆ ಇತ್ಯಾದಿ ಔಷಧಿ ಮಿಶ್ರಣಗಳಿಂದ ಆಯುಷ್ ಶ್ವಾಸ ಚೂರ್ಣ ಎಂಬ ಔಷಧ ಸಿದ್ಧಪಡಿಸಲಾಗಿದೆ. ಒಂದು ವೇಳೆ ಸರ್ಕಾರ ತಮಗೆ ಅನುಮತಿ ನೀಡಿದರೇ ಕರೋನಾ ಸೋಂಕಿತರಿಗೆ ಈ ಔಷಧಿಯನ್ನು ಉಚಿತವಾಗಿ ಹಂಚುತ್ತೇವೆ. ಸಾಮಾನ್ಯವಾಗಿ ಯಾವುದೇ ವೈರಸ್ ಜ್ವರಕ್ಕೆ ಆಯುರ್ವೇದ ಪದ್ಧತಿಯಲ್ಲಿ ರೋಗಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ನೀಡಲಾಗುತ್ತದೆ. ಕರೋನಾ ಸಹ ವೈರಸ್ ಬಾಧೆಯಾಗಿರುವುದರಿಂದ ತಮ್ಮ ಈ ಔಷಧವೂ ಇಮ್ಯೂನಿಟಿ ಭೂಸ್ಟರ್ ನಂತೆ ಕೆಲಸ ಮಾಡುತ್ತದೆ. ಆಯುರ್ವೇದ ಔಷಧಗಳಿಂದ ಯಾವುದೇ ಸೈಡ್ ಎಫೆಕ್ಟ್ ಗಳಿಲ್ಲದ ಕಾರಣ ತಮ್ಮ ಈ ಪ್ರಯೋಗದಿಂದ ರೋಗಿಗಳಿಗೆ ಹಾನಿಯಾಗುವುದಿಲ್ಲ” ಎಂದಿದ್ದರು. ಆಯುರ್ವೇದದಲ್ಲಿ ಆ್ಯಂಟಿ ವೈರಲ್ ಪ್ರಾಪರ್ಟಿ ಇದೆ, ಆದರೆ ಅಲೋಪತಿಯ ಜೊತೆಗೇ ಆಯುರ್ವೇದ ಪದ್ಧತಿಯನ್ನೂ ಅನುಸರಿಸಿದರೇ ನೂರಕ್ಕೆ ನೂರು ಕರೋನಾ ರೋಗ ವಾಸಿಯಾಗುತ್ತದೆ ಎನ್ನುವ ಅಧಮ್ಯ ವಿಶ್ವಾಸ ವ್ಯಕ್ತಪಡಿಸಿದ್ದರು ಸಂತೋಷ್ ಗುರೂಜಿ.
ಆಗಿನ್ನೂ ಆಯುರ್ವೇದದಲ್ಲಿ ಕರೋನಾಗೆ ಮದ್ದು ಕಂಡು ಹಿಡಿಯುವ ಸಾಧ್ಯತೆ ಇದೆಯಾ ಎಂಬ ಹಿನ್ನೆಲೆಯಲ್ಲಿ ಆಯುಷ್ ನ ಪ್ರಖ್ಯಾತ ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಜೊತೆಗೆ ಮಾತುಕಥೆಯೂ ನಡೆಸಲಾಗಿರಲಿಲ್ಲ. ಆನಂತರ ಅಂದರೆ ಮಾರ್ಚ್ 28ರಂದು ಪ್ರಧಾನಿ ಮೋದಿ ಆಯುಷ್ ಇಲಾಖೆಯ ಪರಿಣಿತ ವೈದ್ಯರ ಬಳಿ ವೀಡಿಯೋ ಕಾನ್ಫರೆನ್ಸ್ ನಡೆಸಿ ಕರೋನಾ ಸೋಂಕು ನಿಯಂತ್ರಣಕ್ಕೆ ಆಯುರ್ವೇದದ ಸಾಧ್ಯತೆಗಳಿವೆಯಾ ಎಂದು ವಿಚಾರಿಸಿದರು.
ಎವಿಪಿ ರಿಸರ್ಚ್ ಫೌಂಡೇಷನ್ ಸಂಸ್ಥಾಪಕರಾದ ಪದ್ಮಶ್ರೀ ಪುರಸ್ಕೃತ ಆಯುರ್ವೇದಿಕ್ ವೈದ್ಯ ಕೊಯಮತ್ತೂರಿನ ಪಿ.ಆರ್ ಕೃಷ್ಣಕುಮಾರ್, ಈ ಕಾನ್ಫರೆನ್ಸಿನಲ್ಲಿ ಆಯುರ್ವೇದದ ಔಷಧ ಪ್ರಯೋಗ ಮತ್ತು ಪ್ರಭಾವಗಳ ಕುರಿತಾಗಿ ಸಮಗ್ರವಾಗಿ ಮಾತಾಡಿದ್ದರು.
ಆನಂತರದ ದಿನಗಳಲ್ಲಿ ಕೇಂದ್ರದ ಆರೋಗ್ಯ ಮಂತ್ರಾಲಯವಾಗಲೀ, ಆಯುಷ್ ಇಲಾಖೆಯಾಗಲೀ ಅಥವಾ ಐಸಿಎಂಆರ್ ಆಗಲೀ ಆಯುರ್ವೇದದ ಸಾಧ್ಯತೆಗಳತ್ತ ಗಮನ ಹರಿಸಲೇ ಇಲ್ಲ. ಇಲ್ಲಿ ಅಲೋಪಥಿ ಲಾಭಿ ಕೆಲಸ ಮಾಡಿತಾ ಅಥವಾ ಆಯುಷ್ ಇಲಾಖೆಯೊಳಗಿನ ಪ್ರಭಾವಿ ತಿಮಿಂಗಿಲಗಳ ಕಾಣದ ಹಸ್ತ ಕೈ ಚಾಚಿತಾ ಗೊತ್ತಿಲ್ಲ. ಆದರೆ ಹಿತ್ತಿಲ ಗಿಡ ಮದ್ದಲ್ಲ ಅನ್ನುವ ನಮ್ಮ ನಡವಳಿಗೆ ಇಲ್ಲೂ ಮುಂದುವರೆಯಿತು.
ಇಷ್ಟೆಲ್ಲಾ ಆದ ನಂತರ ಏಪ್ರಿಲ್ 10ರಂದು ಪ್ರಶಾಂತಿ ಆಯುರ್ವೇದಿಕ್ ಕೇಂದ್ರದ ಡಾ. ಗಿರಿಧರ್ ಕಜೆಯವರಿಗೆ ರಾಜ್ಯ ಸರ್ಕಾರ, ಅವರು ಕಂಡು ಹಿಡಿದಿದ್ದಾರೆ ಎನ್ನಲಾದ ಒಂದು ಕರೋನಾ ನಿಯಂತ್ರಕ ಔಷಧಿ ಪ್ರಯೋಗಕ್ಕೆ ಅನುಮತಿ ನೀಡಿತು. ಇದರ ಹಿಂದೆ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷರ ಆಗ್ರಹವೂ ಇತ್ತು, ಸರ್ಕಾರ ಮಠಾಧೀಶರ ಒತ್ತಾಯಕ್ಕೆ ಮಣಿಯಿತು ಎನ್ನುವ ಮಾತುಗಳು ಕೇಳಿ ಬಂದವು. ಇರಲಿ, ಕಜೆ ಯಾವಾಗ ಕರೋನಾಗೆ ಮದ್ದು ಕಂಡು ಹಿಡಿದಿದ್ದೀನಿ ಎಂದು ನೆಲನಲ್ಲಿ, ಭದ್ರಮುಷ್ಟಿ ಮತ್ತು ಅಮೃತಬಳ್ಳಿಯಂತಹ ನಮ್ಮ ಅಜ್ಜಿ ವೈದ್ಯ ಸಮೀಕರಣ ಹೇಳತೊಡಗಿದರೋ, ಅತ್ತ ಕಾವಿ ತೊಟ್ಟ ಬಿಸನೆಸ್ ಮೆನ್ ಬಾಬಾ ರಾಮ್ ದೇವ್ ಕರೋನಿಲ್ ಎನ್ನುವ ಹೆಸರಿಟ್ಟು ಪಥಂಜಲಿ ಸಂಸ್ಥೆಯೂ ಕರೋನಾಗೆ ಔಷಧಿ ಕಂಡಹಿಡಿದಿದೆ ಎಂದು ಸ್ಟೇಟ್ ಮೆಂಟ್ ಕೊಟ್ಟರು.
ಕಜೆಯವರಿಗಾಗಲೀ ಅಥವಾ ಬಾಬಾ ರಾಮ್ ದೇವ್ ಗಾಗಲೀ ಕೇಂದ್ರದ ಆರೋಗ್ಯ ಇಲಾಖೆಯಾಗಲೀ, ಆಯುಷ್ ಇಲಾಖೆಯಾಗಲೀ ಅಥವಾ ಐಸಿಎಂಆರ್ ಆಗಲಿ ಅಂತಿಮ ಅನುಮೋದನೆ ನೀಡಿಯೇ ಇರಲಿಲ್ಲ. ಕೊನೇ ಪಕ್ಷ ಕ್ಲಿನಿಕಲ್ ಟ್ರಯಲ್ ಕೂಡಾ ನಡೆಸದೇ ಅದು ಹೇಗೆ ಇದೇ ಕರೋನಾ ಸೋಂಕಿಗೆ ಇವರಿಬ್ಬರು ಮದ್ದು ಕಂಡು ಹಿಡಿದಿದ್ದೇವೆ ಎಂದರು? ಯಾವಾಗ ಈ ವಿವಾದ ಕಾವು ಪಡೆದುಕೊಂಡಿತೋ ಅತ್ತ ಬಾಬಾ ರಾಮ್ ದೇವ್ ಇತ್ತ ಗಿರಿಧರ್ ಕಜೆ ಇಬ್ಬರೂ ಪ್ಲೇಟ್ ಬದಲಾಯಿಸಿ, ತಾವು ಕಂಡು ಹಿಡಿದಿದ್ದು ಕರೋನಾ ಮದ್ದಲ್ಲ ಕೇವಲ ಇಮ್ಯೂನಿಟಿ ಭೂಸ್ಟರ್ ಎಂದರು.
ಹೋಗಲಿ ಇಷ್ಟಾಯಿತಲ್ಲ, ಗಿರಿಧರ್ ಕಜೆಯವರ ಇಮ್ಯೂನಿಟಿ ಭೂಸ್ಟರ್ ಆದರೂ ಕೆಲಸ ಮಾಡಬೇಕಲ್ಲವೇ. ಸರ್ಕಾರ ಅದಕ್ಕಾದರೂ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಬೇಕಲ್ಲ. ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರೆ ಐಸಿಎಂಆರ್ ಕಜೆಯವರ ಮದ್ದಿಗೆ ಅನುಮೋದನೆ ನೀಡಬೇಕಲ್ಲವಾ? ಪ್ರಶಾಂತಿ ಆಯುರ್ವೇದಿಕ್ ಕೇಂದ್ರದಲ್ಲಿ ಕಜೆಯವರು ಈ ಇಮ್ಯೂನಿಟಿ ಭೂಸ್ಟರ್ ಅನ್ನೇ ಕರೋನಾ ನಿಯಂತ್ರಕ ಎಂದು ಮಾರುತ್ತಿದ್ದಾರಂತೆ. 150-200 ರೂಪಾಯಿಗೆ ಕಜೆಯವರು ಕೊಡುವ ಮದ್ದು ಕರೋನಾ ಮಾರಿಯನ್ನು ನಿಯಂತ್ರಿಸುತ್ತದೆ ಎನ್ನುವುದಾದರೇ ಅದಕ್ಕಿಂತ ಸಂತಸದ ವಿಷಯ ಮತ್ತೊಂದಿಲ್ಲ. ಖಾಸಗಿ ಆಸ್ಪತ್ರೆಗಳು ಲಕ್ಷಗಟ್ಟಲೇ ಕರೋನಾ ಹೆಸರಲ್ಲಿ ಸುಲಿಗೆ ಮಾಡುತ್ತಿರುವುದು ನಿಲ್ಲುತ್ತದೆ. ಕಜೆಯವರ ಮದ್ದನ್ನು ಅಧಿಕೃತವಾಗಿ ಪ್ರಮೋಟ್ ಮಾಡುತ್ತಿರುವ ಒಂದು ಮಾಧ್ಯಮ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೆ ಮೂರು ಹೊತ್ತು ಒಂದೊಂದು ಮಾತ್ರೆಗಳಂತೆ 10 ದಿನಗಳ ಮಾತ್ರೆಯನ್ನು ಕಜೆಯವರು ಉಚಿತವಾಗಿ ನೀಡಿದ್ದಾರಂತೆ. ಈಗ ಅವರ್ಯಾರಿಗೂ ಕರೋನಾ ಭಯವೇ ಇಲ್ಲ. ಅದೇ ಮಾಧ್ಯಮ ಸಂಸ್ಥೆಯೊಂದಿಗೆ ಮಾತಾಡುತ್ತಾ ಕಜೆಯವರು ಈ ಫಾರ್ಮುಲಾವನ್ನು ಸರ್ಕಾರಕ್ಕೆ ನೀಡುವುದಾಗಿ, ಇದನ್ನು ಓಪನ್ ಫಾರ್ಮುಲಾವನ್ನಾಗಿ ಪರಿಗಣಿಸಿ ದೇಶಾದ್ಯಂತ ತಯಾರಿಸಿ ಕರೋನಾ ರೋಗಿಗಳಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 72 ಲಕ್ಷ ಮಾತ್ರೆ ತಯಾರಿಸಿ ಹಂಚಲು ಸಿದ್ಧ ಎಂದು ಗಿರಿಧರ್ ಕಜೆ ಹೇಳಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಕಜೆಯವರ ಮಾತ್ರೆ ಹಂಚಲು ಸರ್ಕಾರ ಯಾಕೆ ಮೀನಾ ಮೇಷ ಎಣಿಸ್ತಿದೆ? ಸರ್ಕಾರಕ್ಕೆ ಕಜೆಯವ ಔಷಧ ಪ್ರಯೋಗದ ಮೇಲೆ ನಂಬಿಕೆ ಇಲ್ಲವೇ?
ಮಂಗಳೂರಿನಲ್ಲಿರುವ ಸ್ನೇಹಿತರಾದ ವೃತ್ತಿಪರ ಆಯುರ್ವೇದಿಕ್ ವೈದ್ಯರೂ ಆಗಿರುವ ಡಾ ಕೇಶವ್ ರಾಜ್ ಇದೇ ತರಹದ ಆಯುರ್ವೇದಿಕ್ ಎನರ್ಜಿ ಭೂಸ್ಟರ್ ಮದ್ದನ್ನು ತಯಾರಿಸಿ ಕರೋನಾ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆಗೆ ಉಚಿತವಾಗಿ ಹಂಚಿದ್ದಾರೆ. ಇತ್ತೀಚೆಗೆ ನಿಧನರಾದ ನಮ್ಮ ಸಾಗರ ತಾಲೂಕಿನ ನರಸೀಪುರದ ನಾಟೀವೈದ್ಯ ನಾರಾಯಣ ಮೂರ್ತಿಗಳೂ ಈ ತರಹದ ಇಮ್ಯೂನಿಟಿ ಭೂಸ್ಟರ್ ಕೊಟ್ಟರೆ ಕರೋನಾ ನಿಯಂತ್ರಣಕ್ಕೆ ಬರುತ್ತದೆ ಎಂದಿದ್ದರು. ನಿಮಗೆ ತಿಳಿದಿರುವ ಯಾವುದಾದರೂ ಆಯುರ್ವೇದಿಕ್ ವೈದ್ಯರ ಬಳಿ ವಿಚಾರಿಸಿ ನೋಡಿ. ಅವರಲ್ಲೂ ಈ ರೀತಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಂದು ಮದ್ದು ಇದ್ದೇ ಇರುತ್ತದೆ. ನಮ್ಮ ಸನಾತನ ಆಯುರ್ವೇದ ವೈದ್ಯಪದ್ಧತಿ ಇಂತಹ ಹಲವು ಸಿದ್ಧ ಸೂತ್ರಗಳನ್ನು ಹೊಂದಿದೆ ಕೂಡಾ.
ಉಪಸಂಹಾರ:
ಈಗ ಕರೋನಾ ಉಪಶಮನಕ್ಕೆ ನಮ್ಮ ಭಾರತೀಯ ವೈದ್ಯ ಪದ್ಧತಿಯನ್ನು ಅವಲಂಭಿಸದೇ ಯಾವುದೋ ದೇಶದ ಲಸಿಕೆ ಕಾಯುತ್ತಾ ಕೂತಿರುವುದು ಯಾಕೆ? ಕಜೆಯೋ, ರಾಮ್ ದೇವೋ, ಮತ್ತೊಬ್ಬರೋ ಮದ್ದು ಕಂಡುಹಿಡಿದಿದ್ದೇವೆ ಅಂದರೆ ಕ್ಲಿನಿಕಲ್ ಟ್ರಯಲ್ ನಡೆಸಿ ಅನುಮತಿ ನೀಡಲು, ಐಸಿಎಂಆರ್ ಗೆ ಶಿಫಾರಸ್ಸು ಮಾಡಲು ನಮ್ಮ ಸರ್ಕಾರಗಳಿಗೆ ಅಡ್ಡಿಯಾಗಿರುವುದೇನು? ಸರ್ಕಾರ ಅಲೋಪಥಿ ಲಾಭಿಗೆ ಸಿಲುಕಿದ್ಯಾ? ಫಾರ್ಮಾಸ್ಯುಟಿಕಲ್ ಕಪಿ ಮುಷ್ಟಿಯಲ್ಲ ಬಂಧಿಯಾಗಿದೆಯಾ? ಖಾಸಗಿ ಆಸ್ಪತ್ರೆಯ ಲಾಭಕೋರತನದಲ್ಲಿ ಎಷ್ಟಾಗತ್ತೋ ಅಷ್ಟು ಪಾಲು ತೆಗೆದುಕೊಂಡು ಬಿಡೋಣ ಎನ್ನುವ ನಿರ್ಧಾರಕ್ಕೆ ಬಂದಿದೆಯಾ?
ಇಷ್ಟೆಲ್ಲಾ ಬರೆದ ಉದ್ದೇಶವಿಷ್ಟೇ, ಅಲೋಪಥಿಯಂತೆ ಆಯುರ್ವೇದವೂ ನಾಳೆ ದಂಧೆಯಾಗದಿರಲಿ. ಪ್ರತಿಭೆಯನ್ನು ಹತ್ತಿಕ್ಕಿ ಪ್ರಭಾವಿಗಳ ತೆಕ್ಕೆಗೆ ಆಯುರ್ವೇದವಾಗಲೀ ಆಯುಷ್ ಇಲಾಖೆಯಾಗಲೀ ಸೇರಿಕೊಳ್ಳದಿರಲಿ. ಕೊನೇಪಕ್ಷ ಸರ್ಕಾರಕ್ಕೆ ಈಗಲಾದರೂ ಬುದ್ದಿ ಬರಲಿ.
-ವಿಭಾ (ವಿಶ್ವಾಸ್ ಭಾರದ್ವಾಜ್)








