ರೇನ್ ಕೋಟ್ ಎಂದು ಭಾವಿಸಿ ಪಿಪಿಇ ಕಿಟ್ ಕದ್ದ ಕುಡುಕ
ನಾಗ್ಪುರ, ಅಗಸ್ಟ್ 1: ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಗೆ ದಾಖಲಾದ ಗಾಯಗೊಂಡ ಕುಡುಕ ವ್ಯಕ್ತಿಯು ರೇನ್ ಕೋಟ್ ಎಂದು ಭಾವಿಸಿ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನಗಳು) ಕಿಟ್ ಅನ್ನು ಕದ್ದಿದ್ದು ನಂತರ ಆತನನ್ನು ಪರೀಕ್ಷಿಸಿದಾಗ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ವರದಿಯ ಪ್ರಕಾರ, ಆ ವ್ಯಕ್ತಿ ಯು ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಾನೆ. ಕಳೆದ ವಾರ, ಅವನು ಅತಿಯಾಗಿ ಕುಡಿದಿದ್ದರಿಂದ ಮನೆಗೆ ಹಿಂದಿರುಗುವಾಗ ಚರಂಡಿಗೆ ಬಿದ್ದು ಗಾಯಗೊಂಡಿದ್ದನು. ಆರಂಭಿಕ ಚಿಕಿತ್ಸೆಗಾಗಿ ಅವನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಅವನನ್ನು ನಾಗ್ಪುರದ ಮಾಯೊ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮನೆಗೆ ಮರಳಿದಾಗ, ಅವನ ಬಳಿ ಪಿಪಿಇ ಕಿಟ್ ಇತ್ತು. ಇದು 1,000 ಕೋಟಿಗೆ ಖರೀದಿಸಿದ ರೇನ್‌ಕೋಟ್ ಎಂದು ಅವನು ತನ್ನ ಸ್ನೇಹಿತರಿಗೆ ತಿಳಿಸಿದನು. ಇದು ರೇನ್‌ಕೋಟ್ ಅಲ್ಲ, ಆದರೆ ಪಿಪಿಇ ಕಿಟ್ ಎಂದು ಗಮನಿಸಿದ ಜನರು ಈ ಮಾಹಿತಿಯನ್ನು ನಗರದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ರವಾನಿಸಿದರು. ಅವರು ಆ ವ್ಯಕ್ತಿಯಿಂದ ರಕ್ಷಣಾತ್ಮಕ ಸಾಧನಗಳನ್ನು ವಶಪಡಿಸಿಕೊಂಡರು ಮತ್ತು ಬಳಿಕ ಅದನ್ನು ಸುಟ್ಟುಹಾಕಿದರು.
ಆತನನ್ನು ಪ್ರಶ್ನಿಸಿದಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಪಿಪಿಇ ಕಿಟ್ ಅನ್ನು ಕದ್ದಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ನಂತರ, ಅಧಿಕಾರಿಗಳು ಕೋವಿಡ್ ಪರೀಕ್ಷೆಗಾಗಿ ಅವನ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶವು ಆತನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತರುವಾಯ, ಅಧಿಕಾರಿಗಳು ಅವನ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಸೇರಿದಂತೆ ಅವನ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆಹಚ್ಚಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದರು. ವರದಿ ಪ್ರಕಾರ, ಅವರೆಲ್ಲರಿಗೂ ನೆಗೆಟಿವ್ ಬಂದಿದೆ.