ಲೆಬನಾನ್ ನ ರಾಜಧಾನಿ ಬೈರುತ್‍ನಲ್ಲಿ ಭಾರೀ ಅವಳಿ ಸ್ಫೋಟ ಸಂಭವಿಸಿದ್ದು, ಅವಘಡದಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಈ ದುರ್ಘಟನೆಯಲ್ಲಿ ಅಂದಾಜು 4000 ಜನರು ಗಾಯಗೊಂಡಿದ್ದು, ಇದು ಉಗ್ರಗಾಮಿಗಳ ಕೃತ್ಯ ಎಂಬ ಅನುಮಾನಗಳು ವ್ಯಕ್ತವಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದ್ದು, ಅನೇಕರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೇ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಲೆಬನಾನ್‍ನಲ್ಲಿ ಸದಾ ಅಂತರಿಕ ಕಲಹ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ಅಲ್ಲಿನ ಜನರು ಪರದಾಡುವಂತಹ ಪರಿಸ್ಥಿತಿಯಿದೆ. ಇದರ ನಡುವೆ ಬೈರುತ್ ನಲ್ಲಿ ಸಂಭವಿಸಿದ ಬೃಹತ್ ಅನಾಹುತದಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಪೋಟದ ತೀವ್ರತೆಗೆ ಬೈರುತ್‍ನ ಐತಿಹಾಸಿಕ ಕೋಟೆ ಕೊತ್ತಲಗಳು ಮತ್ತು ಪ್ರಸಿದ್ಧ ಸ್ಮಾರಕಗಳಿಗೆ ಹಾನಿಯಾಗಿದ್ದು, ಅನೇಕ ಕಟ್ಟಡಗಳು ನಾಶವಾಗಿವೆ. ಅಲ್ದೇ ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು, ಹಲವಾರು ಕುಟುಂಬುಗಳು ಸೂರು ಕಳೆದುಕೊಂಡು ಬೀದಿಗೆ ಬಿದ್ದಿವೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದ್ದು, ಇಡೀ ನಗರದಲ್ಲಿ ಭದ್ರತಾಪಡೆಗಳು ಮೊಕ್ಕಾಂ ಹೂಡಿವೆ. ತುರ್ತು ಸೇವೆಗಳಿಗಾಗಿ ಸೇನಾ ಹೆಲಿಕಾಪ್ಟರ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ.








