ಟೆಂಟ್ ನಲ್ಲಿದ್ದ ಶ್ರೀ ರಾಮ ಇನ್ನು ಗರ್ಭ ಗುಡಿಯಲ್ಲಿ ದರ್ಶನ – ಪ್ರಧಾನಿ ನರೇಂದ್ರ ಮೋದಿ
ಶತಮಾನಗಳಿಂದ ಟೆಂಟ್ ನಲ್ಲಿದ್ದ ಶ್ರೀರಾಮ ಲಲ್ಲಾ ಮುಂದಿನ ದಿನಗಳಲ್ಲಿ ಗರ್ಭಗುಡಿಯಲ್ಲಿ ದರ್ಶನ ನೀಡಲಿದ್ದಾನೆ. ಅಯೋಧ್ಯೆಯ ಶ್ರೀ ರಾಮ ಮಂದಿರ ಭಾರತದ ಒಗ್ಗಟ್ಟಿನ ಪ್ರತೀಕವಾಗಲಿದೆ. ಮುಂಬರುವ ದಿನಗಳಲ್ಲಿ ಜಗತ್ತಿನ ರಾಮ ಭಕ್ತರು ಅಯೋಧ್ಯೆಗೆ ಬಂದು ರಾಮನ ದರ್ಶನ ಪಡೆದುಕೊಳ್ಳಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ಮಾಡಿದ ನಂತರ ಮಾತನಾಡಿದ ಪ್ರಧಾನಿ ಮೋದಿಯವರು, ರಾಮ ಚರಿತ್ರೆಯಿಂದ ಪ್ರೇರಣೆಗೊಂಡಿದ್ದ ಮಹಾತ್ಮ ಗಾಂಧೀಜಿಯವರು ರಾಮ ರಾಜ್ಯದ ಕನಸು ಕಂಡಿದ್ದರು. ಈಗ ರಾಮನ ಸೂತ್ರಗಳನ್ನು ಪಾಲಿಸಿಕೊಂಡು ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ರು.
ಅಯೋಧ್ಯೆ ಶ್ರೀ ರಾಮ ಮಂದಿರ ಎಲ್ಲಾ ಮಾನವೀಯತೆಗೂ ಸ್ಪೂರ್ತಿಯಾಗಲಿದೆ. ಕೊವಿಡ್ ನಿಂದಾಗಿ ಇಂದಿನ ಶಿಲಾನ್ಯಾಸ ಕಾರ್ಯಕ್ರಮವನ್ನು ಕೆಲವೊಂದು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಮಾಡಿದ್ದೇವೆ. ಈ ಹಿಂದೆ ಶ್ರೀ ರಾಮ ಜನ್ಮ ಭೂಮಿ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಾಗಲೂ ಎಲ್ಲರೂ ಶಾಂತಿಯಿಂದಲೇ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದೇವು. ಇವತ್ತು ಕೂಡ ಎಲ್ಲರೂ ಶಾಂತಿಯನ್ನು ಕಾಪಾಡಿಕೊಂಡಿದ್ದಾರೆ. ಇದು ನಾವು ಶ್ರೀ ರಾಮನಿಗೆ ಸಲ್ಲಿಸುತ್ತಿರುವ ಗೌರವ. ರಾಮ ನಡೆದ ಹಾದಿಯಲ್ಲಿ ನಾವೆಲ್ಲಾ ನಡೆಯಬೇಕು. ಈ
ಮಂದಿರ ಭಾವೈಕೈತೆಯ ಕೇಂದ್ರವಾಗಬೇಕು ಎಂದು ಮೋದಿ ತಿಳಿಸಿದ್ದಾರೆ.
ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮುಗಿದ ನಂತರ ಇಡೀ ಅಯೋಧ್ಯೆಯ ಚಿತ್ರಣವೇ ಬದಲಾಗಲಿದೆ. ಇಡೀ ವಿಶ್ವವೇ ಅಯೋಧ್ಯೆಯತ್ತ ಚಿತ್ತವನ್ನಿಡಲಿದೆ. ಶತ ಶತಮಾನಗಳ ನಿರೀಕ್ಷೆಗೆ ಇಂದು ತೆರೆ ಬಿದ್ದಿದೆ. ಸರಯೂ ತಟದಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ರಾಷ್ಟ್ರೀಯತೆ, ಆಧುನಿಕತೆ ಮತ್ತು ಭವಿಷ್ಯದ ಸಂಕಲ್ಪಕ್ಕೆ ಪ್ರೇರಣೆಯಾಗಲಿದೆ ಎಂದ್ರು.
ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಮಂದಿ ಹೋರಾಟ ನಡೆಸಿದ್ದರು. ಅನೇಕ ಮಂದಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದರು. ಬಲಿದಾನ ಮಾಡಿದ್ದರು. ಅದೇ ರೀತಿ ರಾಮ ಮಂದಿರ ನಿರ್ಮಾಣಕ್ಕೂ ಶತ ಶತಮಾನಗಳಿಂದ ಅನೇಕ ಮಂದಿ ಹೋರಾಟ ನಡೆಸಿದ್ದಾರೆ. ಅವರ ತ್ಯಾಗ, ಹೋರಾಟ ಮತ್ತು ಸಂಕಲ್ಪದಿಂದಾಗಿ ಇಂದು ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮ ಮಂದಿರ ಹೋರಾಟಕ್ಕೆ ಶ್ರಮಿಸಿದ್ದ ಮುಖಂಡರನ್ನು ಇದೇ ವೇಳೆ ಪ್ರಧಾನಿ ನೆನಪಿಸಿಕೊಂಡ್ರು

ಒಟ್ಟಿನಲ್ಲಿ ಶತ ಶತಮಾನಗಳ ಕಾಯುವಿಕೆ ಅಂತ್ಯಗೊಂಡಿದೆ. ಭಾರತ ಅಯೋಧ್ಯೆಯಲ್ಲಿ ಸುವರ್ಣ ಅಧ್ಯಾಯವನ್ನು ಬರೆಯಲಿದೆ ಎಂದ ಪ್ರಧಾನಿ, ರಾಮ ಎಲ್ಲೆಲ್ಲೂ ಇದ್ದಾನೆ. ರಾಮ ನಮಗೆಲ್ಲರಿಗೂ ರಾಮ. ಪರಸ್ಪರ ಪ್ರೀತಿ, ಸಹೋದರತೆಯನ್ನು ಶ್ರೀ ರಾಮ ಮಂದಿರ ಪ್ರತಿಬಿಂಬಿಸಲಿದೆ ಎಂದು ಅವರು ಹೇಳಿದ್ರು.








