ಕೊರೋನಾ ಸೋಂಕಿನ ಜೊತೆಗೆ ಕರುನಾಡಿನಲ್ಲಿ ವರುಣ ದೇವನ ಅವಾಂತರ…!
ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಚಿಕ್ಕಮಗಳೂರು, ಮಡಿಕೆರಿ, ಹಾಸನ, ದಕ್ಷಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊರೋನಾ ಭೀತಿ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಮಳೆಯಿಂದಾಗಿ ಜನ ಪ್ರವಾಹ ಭೀತಿಯನ್ನು ಎದುರಿಸುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿಎಸ್‍ವೈ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕರುನಾಡಿನ ಜೀವ ನದಿಗಳು ತುಂಬಿ ಹರಿಯುತ್ತಿವೆ. ಕೆಲವೊಂದು ನದಿಗಳು ಅಪಾಯಮಟ್ಟದಲ್ಲಿ
ಹರಿಯುತ್ತಿರುವುದರಿಂದ ಹಲವು ಪ್ರದೇಶಗಳ ಸಂಪರ್ಕಕವೇ ಕಡಿತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದು, ರಸ್ತೆಯ ಮೇಲೆ ಕಲ್ಲುಬಂಡೆಗಳು ಉರುಳಿ ಬಿದ್ದಿವೆ. ಹೀಗಾಗಿ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ರಸ್ತೆಯಲ್ಲೇ ವಾಹನಗಳು ಸ್ಥಗಿತಗೊಂಡಿವೆ.
ಧಾರಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಭದ್ರಾ ಮತ್ತು ತುಂಗಾ ನದಿಗಳ ಅಬ್ಬರ ಜೋರಾಗಿದೆ. ಶೃಂಗೇರಿ, ಕಿಗ್ಗಾ, ಕೆರೆಕಟ್ಟ, ಮೂಡಿಗೆರೆ, ಕಳಸ, ಹೆಬ್ಬಾಳೆ ಸೇತುವೆಗಳು ಮುಳುಗಡೆಯ ಭೀತಿಯನ್ನು ಎದುರಿಸುತ್ತಿವೆ.
ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನ ನದಿ ನೇತ್ರಾವತಿ
ಕೂಡ ತುಂಬಿ ಹರಿಯುತ್ತಿದೆ. ಹಾಗೇ ಕುಮಾರಧಾರ ನದಿ ಕೂಡ ತುಂಬಿ ಹರಿಯುತ್ತಿರುವುದರಿಂದ ಸುಬ್ರಮಣ್ಯದ ಸ್ನಾನ ಘಟ್ಟ ಮುಳುಗಡೆಯಾಗಿದೆ. ಇನ್ನು ಉಡುಪಿಯಲ್ಲಿ ಈಗಾಗಲೇ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ.
ಮತ್ತೊಂದೆಡೆ ಮಡಿಕೆರಿಯ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳೆದ ವರ್ಷದಂತೆ ಈ ಬಾರಿಯೂ ಪ್ರವಾಹದ ಭೀತಿಯನ್ನು ಜನ ಎದುರಿಸುತ್ತಿದ್ದಾರೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಾವೇರಿ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಕೇರಳದ ವೈನಾಡಿನಲ್ಲಿ ಧಾರಕಾರ ಮಳೆಯಿಂದಾಗಿ ಕಬಿನಿ ಜಲಾಶಯದ ಹೊಳ ಹರಿವು ಹೆಚ್ಚಾಗಿದೆ. ಜಲಾಶಯದಿಂದ
ಸುಮಾರು 50 ಸಾವಿರ ಕ್ಯೂಸೆಕ್ ಹೊರ ಹರಿವು ಇರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಹಾಸನ ಜಿಲ್ಲೆಯಲ್ಲೂ ಮಳೆರಾಯ ಅಬ್ಬರ ಜಾಸ್ತಿಯಾಗಿದೆ. ಬಿಸಿಲೆ ಘಾಟ್‍ನ ರಸ್ತೆಯಲ್ಲಿ ಮರಗಳು ಧರೆಗುಳಿದಿವೆ. ಇದ್ರಿಂದ ಬಿಸಿಲೆ ಘಾಟ್ ನ ಸಂಚಾರ ಕೂಡ ಸ್ಥಗಿತಗೊಂಡಿದೆ. ಇನ್ನು ಬೆಳಗಾವಿಯಲ್ಲೂ ಪ್ರವಾಹದ ಭೀತಿ ಹೆಚ್ಚಾಗುತ್ತಿದೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಮಳೆ ಮತ್ತು ಗಾಳಿಯ ಅಬ್ಬರ ಕೂಡ ಜೋರಾಗಿದೆ.
ಒಟ್ಟಿನಲ್ಲಿ ಕರುನಾಡಿನಲ್ಲಿ ಒಂದೆಡೆ ಕೊರೋನಾ ಸೋಂಕಿನ ಭಯ., ಮತ್ತೊಂದೆಡೆ ಪ್ರಕೃತಿಯ ಮುನಿಸು.. ಹೀಗೆ ಜನ ಭಯಭೀತರಾಗಿದ್ದಾರೆ.








