ದಕ್ಷಿಣ ಕನ್ನಡ ಪ್ರವಾಹ ಭೀತಿ – ಅಪಾಯದ ಮಟ್ಟ ಸಮೀಪಿಸುತ್ತಿದೆ ನೇತ್ರಾವತಿ – ಕುಮಾರಧಾರ
ಮಂಗಳೂರು, ಅಗಸ್ಟ್ 6: ದಕ್ಷಿಣ ಕನ್ನಡ. ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಕರಾವಳಿಯ ಜೀವನದಿ ನೇತ್ರಾವತಿ ಮತ್ತು ಕುಮಾರಧಾರ ತುಂಬಿ ಹರಿಯುತ್ತಿದೆ.
ನೀರಕಟ್ಟೆ ಮತ್ತು ಉಪ್ಪಿನಂಗಡಿಯ ಸನ್ನಂಪಡಿಯಲ್ಲಿ 11 ವಿದ್ಯುತ್ ಕಂಬಗಳು ಕುಸಿದು ಬಿದ್ದಿವೆ. ಬೈರಿಕಟ್ಟೆಯಲ್ಲಿ ಎರಡು ವಿದ್ಯುತ್ ಕಂಬಗಳ ಮೇಲೆ ಬೃಹತ್ ಮರ ಬಿದ್ದಿದೆ. ಮರ ಬಿದ್ದಿರುವ ಕಾರಣ, ವಿಟ್ಲ -ಕನ್ಯಾನಾ ಪರಿಸರದಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸುಬ್ರಹ್ಮಣ್ಯದಲ್ಲಿ ಸ್ನಾನದ ಘಟ್ಟಗಳು ಬುಧವಾರ ಮತ್ತೆ ಮುಳುಗಿವೆ. ಕುಮಾರಧಾರ ನದಿ ತುಂಬಿ ಹರಿಯುತ್ತಿರುವುದರಿಂದ, ಹಳೆಯ ಸೇತುವೆ ಮತ್ತು ಚೆಕ್ ಅಣೆಕಟ್ಟು ಕೂಡ ಮುಳುಗಿದೆ. ಹಳೆಯ ಸೇತುವೆಯ ಮುಳುಗಿದ್ದು, ಪಂಜ ಮತ್ತು ಸುಬ್ರಹ್ಮಣ್ಯ ನಡುವಿನ ಸಂಚಾರ ಅಸ್ತವ್ಯಸ್ತಗೊಂಡಿದೆ. ಧರ್ಮಸ್ಥಳ ಸ್ನಾನಘಟ್ಟದ ಸಮೀಪದ ಅಣೆಕಟ್ಟು ಸಮಾನಂತರವಾಗಿ ನೀರು ಹರಿಯುತ್ತಿದ್ದು, ಮುಳುಗಡೆ ಭೀತಿ ಎದುರಾಗಿದೆ.
ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 88.3 ಮಿ.ಮೀ ಮಳೆಯಾಗಿದೆ. ಹಿಂದಿನ ಮಾನ್ಸೂನ್‌ನಲ್ಲಿ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 57.7 ಮಿ.ಮೀ ಮಳೆಯಾಗಿತ್ತು. ಬೆಳ್ತಂಗಡಿಯಲ್ಲಿ ಸರಾಸರಿ 123.5 ಮಿ.ಮೀ ಮಳೆಯಾಗಿದ್ದು, ಅತ್ಯಧಿಕ ಮಳೆ ದಾಖಲಾಗಿದೆ. ಭಾರಿ ಮಳೆಯಿಂದಾಗಿ, ಬಂಟ್ವಾಳ ದ ನೇತ್ರಾವತಿ ನದಿಯ ನೀರಿನ ಮಟ್ಟವು 7.4 ಮೀಟರ್ ಎತ್ತರದಲ್ಲಿದೆ, ಇದು ಅಪಾಯದ ಮಟ್ಟಕ್ಕೆ (8.5 ಮೀಟರ್) ಹತ್ತಿರದಲ್ಲಿದೆ








