ನವದೆಹಲಿ: ಸಂಸತ್ತಿನಲ್ಲಿ ದೆಹಲಿ ಹಿಂಸಾಚಾರ ವಿಚಾರವಾಗಿ ಗದ್ದಲ ಉಂಟಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಇಂದು ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸಂಸದ ಅಧಿರ್ ರಂಜನ್ ಚೌಧರಿ, ಗೌವರ್ ಗೊಗೋಯ್ ಹಾಗೂ ಮೋನಿಕಾ ಟಾಗೋರ್ ಅವರು ದೆಹಲಿ ಹಿಂಸಾಚಾರ ಕುರಿತು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಆದ್ರೆ ನಿನ್ನೆಯಂತೆ ಇಂದೂ ಸಹ ಈ ವಿಚಾರವಾಗಿ ಚರ್ಚೆಗೆ ಅವಕಾಶ ಸಿಗಲಿಲ್ಲ. ಇದರಿಂದ ಉಭಯ ಸದನಗಳಲ್ಲೂ ತೀವ್ರ ಗದ್ದಲ ಉಂಟಾಯಿತು. ಹೀಗಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆ ಮುಂದೂಡಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆ ರಕ್ತಪಾತಕ್ಕೆ ಕಾರಣವಾಗಿತ್ತು. ಈ ಹಿಂಸಾಚಾರ ಸುಮಾರು 47 ಮಂದಿಯನ್ನು ಬಲಿಪಡೆದುಕೊಂಡಿತ್ತು. ಅಲ್ಲದೆ, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.








