ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ ಜನರು ಹೈರಾಣಾಗಿದ್ದಾರೆ. ಹಲವೆಡೆ ಪ್ರವಾಹದ ಆತಂಕ ಸೃಷ್ಟಿಯಾಗಿರುವ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದಾರೆ. “ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವುದು, ಸ್ಥಳದಲ್ಲಿಯೇ ಪರಿಹಾರ ವಿತರಣೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳು”ವಂತೆ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ.

ಸದ್ಯ ಕೋವಿಡ್ ದೃಢಪಟ್ಟ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಸಚಿವರಿಗೆ ಇಂತಹ ಕಷ್ಟದ ಸಮಯದಲ್ಲಿ ಕೆಲ ತೀರ್ಮಾನಗಳನ್ನು ಖುದ್ದು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಈಗಾಗಲೇ 50 ಕೋಟಿ ಹಣ ಬಿಡುಗಡೆ ಮಾಡಿದ್ದು ಅಗತ್ಯ ಇದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ಅಲ್ದೇ ಅತಿ ತುರ್ತು ಕೆಲಸಗಳಿಗೆ ನೀವೇ ತೀರ್ಮಾನ ತೆಗೆದುಕೊಂಡು ಮುಂದುವರೆಯಬೇಕು ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ.








