ಐಪಿಎಲ್ ಟೂರ್ನಿಗೆ ವಿವೋ ಪ್ರಾಯೋಜಕತ್ವ ಇಲ್ಲ – ಬಿಸಿಸಿಐ ಸ್ಪಷ್ಟನೆ
ಕೊನೆಗೂ ಸ್ವಾಭಿಮಾನಿ ಭಾರತೀಯರ ಕೂಗಿಗೆ ಬಿಸಿಸಿಐ ತಲೆಬಾಗಿದೆ. 2020ರ ಐಪಿಎಲ್ ಟೂರ್ನಿಗೆ ಚೀನಾ ಮೂಲದ ವಿವೋ ಕಂಪೆನಿಯ ಜೊತೆಗಿನ ಪ್ರಾಯೋಜಕತ್ವವನ್ನು ಅಮಾನತಿನಲ್ಲಿಡಲಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ಹೇಳಿದೆ.
ವಿವೋ ಕಂಪೆನಿಯ ಪ್ರಾಯೋಜಕತ್ವದೊಂದಿಗೆ ಐಪಿಎಲ್ ಟೂರ್ನಿಯನ್ನು ಸಂಘಟಿಸಿದ್ರೆ ಐಪಿಎಲ್ ಬ್ಯಾನ್ ಮಾಡಬೇಕಾಗುತ್ತದೆ ಆರ್ ಆರ್ ಎಸ್ ನ ಸ್ವದೇಶಿ ಜಾಗೃತಿ ಮಂಚ್ ಬಹಿಂರಗವಾಗಿಯೇ ಹೇಳಿಕೆ ನೀಡಿತ್ತು. ಇದ್ರ ಬೆನ್ನಲ್ಲೇ ಸಾಮಾಜಿಕ ಜಾಲ ತಾಣದಲ್ಲೂ ಬಿಸಿಸಿಐ ವಿರುದ್ದ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಸಿಸಿಐ ವಿವೋ ಕಂಪೆನಿಯ ಜೊತೆಗಿನ ಈ ವರ್ಷದ ಒಪ್ಪಂದವನ್ನು ಸ್ಥಗಿತಗೊಳಿಸಿದೆ.
ಗಲ್ವಾನ್ ಗಡಿಯಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಭಾರತದ ಸುಮಾರು 20ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಆನಂತರ ದೇಶದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂದು ಅಭಿಯನ ಶುರುವಾಗಿತ್ತು. ಈ ನಡುವೆ ಕೇಂದ್ರ ಸರ್ಕಾರ ಕೂಡ ಸುಮಾರು 60ಕ್ಕೂ ಹೆಚ್ಚು ಚೀನಾ ಆಪ್‍ಗಳನ್ನು ನಿಷೇಧಿಸಿತ್ತು.
2017ರಲ್ಲಿ ಬಿಸಿಸಿಐ ಮತ್ತು ವಿವೋ ಕಂಪೆನಿಯು 2018ರಿಂದ 2022ರವರೆಗೆ 2199 ಕೋಟಿಯ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತ್ತು. ಐಪಿಎಲ್ ಟೂರ್ನಿಯ ಪ್ರಮುಖ ಪ್ರಾಯೋಜಕತ್ವ ವಹಿಸಿದ್ದ ವಿವೋ ಕಂಪೆನಿ ಜೊತೆಗಿನ ಒಪ್ಪಂದವನ್ನು ಈ ಬಾರಿ ರದ್ದುಗೊಳಿಸಿರುವುದು ಬಿಸಿಸಿಐಗೆ ದೊಡ್ಡ ಹೊಡೆತ ನೀಡಿದೆ. ಅಲ್ಲದೆ ಈ ಪ್ರಾಯೋಜಕತ್ವದಿಂದ ಐಪಿಎಲ್ ಫ್ರಾಂಚೈಸಿಗಳು ವರ್ಷಕ್ಕೆ 27.5 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದವು.
ಸೆಪ್ಟಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ ನಡೆಯಲಿದೆ. ಇದೀಗ ಸಮಯದ ಅಭಾವದಿಂದ ಹೊಸ ಪ್ರಾಯೋಜಕರು ಸಿಗೋದು ಕೂಡ ಅನುಮಾನವಾಗಿದೆ. ಆದ್ರೆ ಬಿಸಿಸಿಐ ಕೈಯಲ್ಲಿ ಯಾವುದು ಕೂಡ ಅಸಾಧ್ಯ ಎಂಬುದು ಇಲ್ಲ. ಭಾರತೀಯ ಕಂಪೆನಿಗಳು ಪ್ರಾಯೋಜಕತ್ವ ನೀಡುವ ಸಾಧ್ಯತೆಯೂ ಇದೆ. ಬಹುಶಃ ರಿಲ್ಯಾಯನ್ಸ್ ಕಂಪೆನಿಯು ಈ ಬಾರಿಯ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವ ನೀಡಿದ್ರೂ ಅಚ್ಚರಿ ಏನಿಲ್ಲ.
ಒಟ್ಟಿನಲ್ಲಿ ಕೋವಿಡ್-19 ನಡುವೆ ಬಿಸಿಸಿಐ ಕಷ್ಟಪಟ್ಟು ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ. ಈ ನಡುವೆ ಪ್ರಾಯೋಜಕತ್ವ ಇಲ್ಲದೆ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿದ್ರೆ ಬಿಸಿಸಿಐ ಮತ್ತು ಫ್ರಾಂಚೈಸಿಗಳಿಗೆ ನಷ್ಟ ಉಂಟಾಗಲಿದೆ.








