ಬೆಳಗಾವಿ: ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹದ ಭೀಭತ್ಸ್ಯ ದೃಷ್ಯವೇ ಇನ್ನೂ ಮರೆಮಾಚಿಲ್ಲ. ಆಗ ಸಂಭವಿಸಿದ್ದ ನೆರೆಯ ಕರಾಳ ನೆನಪಿನಿಂದ ಇನ್ನೂವರೆಗೂ ಜನರು ಹೊರಬರಲು ಶತ ಪ್ರಯತ್ನ ಮಾಡುತ್ತಿರುವ ಹೊತ್ತಿನಲ್ಲೇ ಇದೀಗ ಮತ್ತದೇ ಭೀತಿ ಎದುರಾಗಿದೆ. ಮತ್ತೆ ಪ್ರವಾಹ ಮರುಕಳಿಸುವ ಆತಂಕ ಎದುರಾಗಿದೆ. ರಾಜ್ಯಾದ್ಯಂತ ಮಹಾಮಳೆ ಅವಾಂತರ ಸೃಷ್ಟಿಸಿದೆ. ಇದೀಗ ಬೆಳಗಾವಿಯ ಗೋಕಾಕ್ ಭಾಗದ ಜನರಲ್ಲೂ ಪ್ರವಾಹದ ನಡುಕ ಹುಟ್ಟಿದೆ. ಮಾರ್ಕಂಡೇಯ ನದಿ ಒಳಹರಿವೂ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಲೇ ಇದ್ದು, ನದಿ ಪಾತ್ರದ ಜನರಲ್ಲಿ ಭಯ ಶುರುವಾಗಿದೆ. ವರುಣನ ರೌದ್ರಾವತಾರಕ್ಕೆ ಜಲಕಂಟಕ ಎದುರಾಗಿದ್ದು, ಈಗಾಗಲೇ ಧಾರಕಾರ ಮಳೆಗೆ ಘಟಪ್ರಭಾ ನದಿಗೆ ನಿರ್ಮಿಸಿರುವ ಸಿಂಗಳಾಪುರ ಬ್ರಿಡ್ಜ್ ಮುಳುಗಡೆಯಾಗಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಉಗ್ರ ಸ್ವರೂಪ ತಾಳಿರುವ ವರುಣರಾಯನ ಕುದೃಷ್ಟಿ ಗಡಿ ಜಿಲ್ಲೆ ಬೆಳಗಾವಿಯತ್ತಲೂ ಬೀರಿದೆ. ಮಹಾರಾಷ್ಟ್ರದಲ್ಲಿ ವರುಣನ ಅವಾಂತರಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಎಲ್ಲಿ ನೊಡಿದ್ರು ಬರಿ ನೀರೇ ನೀರೆ ಕಾಣುತ್ತಿದೆ. ಇದೀಗ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಬೆಳಗಾವಿಯಲ್ಲಿ ಮತ್ತೆ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರವಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತವೂ ಸೂಚನೆ ನೀಡಿದೆ. ನದಿಯಲ್ಲಿ ಹರಿವು ಹೆಚ್ಚುತ್ತಲೇ ಇದ್ದು, ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ.








