ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಾರ್ಮಿಕ
ಪನ್ನಾ, ಅಗಸ್ಟ್ 7: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರ ಗಣಿಯೊಂದರಲ್ಲಿನ ಕಾರ್ಮಿಕನಿಗೆ 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳು ಸಿಕ್ಕಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಆಳವಿಲ್ಲದ ಗಣಿ ಅಗೆಯುವಾಗ, ಸುಬಲ್ ಹೆಸರಿನ ಕಾರ್ಮಿಕನಿಗೆ 7.5 ಕ್ಯಾರೆಟ್ ನಿವ್ವಳ ತೂಕದ ಮೂರು ವಜ್ರಗಳು ಸಿಕ್ಕಿದೆ ಎಂದು ಪನ್ನಾ ಜಿಲ್ಲೆಯ ವಜ್ರ ಅಧಿಕಾರಿ ಆರ್.ಕೆ.ಪಾಂಡೆ ತಿಳಿಸಿದ್ದಾರೆ. ತಜ್ಞರು ಈ ಅಮೂಲ್ಯವಾದ ಕಲ್ಲುಗಳ ಮೌಲ್ಯವನ್ನು 30 ಲಕ್ಷದಿಂದ 35 ಲಕ್ಷ ರೂ ಎಂದು ಅಂದಾಜಿಸಿದ್ದಾರೆ.

ಕಾರ್ಮಿಕ ಕಲ್ಲುಗಳನ್ನು ಜಿಲ್ಲಾ ವಜ್ರ ಕಚೇರಿಯಲ್ಲಿ ಠೇವಣಿ ಇಟ್ಟಿದ್ದು, ಸರ್ಕಾರದ ನಿಯಮಗಳ ಪ್ರಕಾರ ಅವುಗಳನ್ನು ಹರಾಜು ಹಾಕಲಾಗುವುದು ಎಂದು ಪಾಂಡೆ ತಿಳಿಸಿದ್ದಾರೆ.
ಶೇಕಡಾ 12 ರಷ್ಟು ತೆರಿಗೆಯನ್ನು ಕಡಿತಗೊಳಿಸಿದ ನಂತರ, ಉಳಿದ 88 ಶೇಕಡಾ ಮಾರಾಟದ ಆದಾಯವನ್ನು ಸುಬಲ್ ಪಡೆಯುತ್ತಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಮತ್ತೊಬ್ಬ ಕಾರ್ಮಿಕ ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಪನ್ನಾದ ಒಂದು ಗಣಿ ಯಿಂದ 10.69 ಕ್ಯಾರೆಟ್ ವಜ್ರವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದ. ಪನ್ನಾ ಹಿಂದುಳಿದ ಪ್ರದೇಶದಲ್ಲಿದ್ದು, ಇದು ವಜ್ರದ ಗಣಿಗಳಿಗೆ ವಿಶ್ವಪ್ರಸಿದ್ಧವಾಗಿದೆ.








