ಚೆನ್ನೈನ ಹೊರವಲಯದಲ್ಲಿರುವ ಅಮ್ಮೋನಿಯಮ್ ನೈಟ್ರೇಟ್ ವಿಲೇವಾರಿಗೆ ಕಸ್ಟಮ್ಸ್ ಇಲಾಖೆ ಕ್ರಮ
ಚೆನ್ನೈ, ಅಗಸ್ಟ್7: ಕೆಲವು ದಿನಗಳ ಹಿಂದೆ ಲೆಬನಾನ್ನ ಬೈರುತ್ ನಗರದಲ್ಲಿ ನಡೆದ ಭಯಾನಕ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಭಾರತದ ಕಸ್ಟಮ್ಸ್ ಅಧಿಕಾರಿಗಳು ಮತ್ತು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಚೆನ್ನೈನ ಹೊರವಲಯದಲ್ಲಿರುವ ಸತ್ವ ಕಂಟೇನರ್ ಸರಕು ನಿಲ್ದಾಣದಲ್ಲಿ ಸಂಗ್ರಹಿಸಿದ 740 ಟನ್ ಅಮ್ಮೋನಿಯಮ್ ನೈಟ್ರೇಟ್ ವಿಲೇವಾರಿ ಮಾಡಲು ಮುಂದಾಗಿದೆ.
ಭಾರತ ಸರ್ಕಾರವು ನಿಗದಿಪಡಿಸಿದ ಆಮದು ನೀತಿ ನಿರ್ಬಂಧಗಳಿಂದಾಗಿ 2015 ರಲ್ಲಿ ಅಮ್ಮೋನಿಯಮ್ ನೈಟ್ರೇಟ್ ರವಾನೆಯನ್ನು ಕರೂರ್ ಮೂಲದ ಕಂಪನಿಯಿಂದ ವಶಪಡಿಸಿಕೊಳ್ಳಲಾಗಿದೆ. ಮನಾಲಿಯಲ್ಲಿನ ಸರಕು ನಿಲ್ದಾಣವು ನಗರದಿಂದ 20 ಕಿ.ಮೀ ದೂರದಲ್ಲಿದೆ ಮತ್ತು 2 ಕಿ.ಮೀ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ವಸತಿ ಕಟ್ಟಡಗಳಿಲ್ಲ ಎಂದು ಕಸ್ಟಮ್ಸ್ ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಿಎಫ್ಎಸ್ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ ನಂತರ ಟಿಎನ್ಪಿಸಿಬಿ ಸಲ್ಲಿಸಿದ ವರದಿ ಪ್ರಕಾರ ಸರಕು ಸಾಗಣೆ ಕೇಂದ್ರದಿಂದ 700 ಮೀಟರ್ ದೂರದಲ್ಲಿರುವ ಮನಾಲಿ ನ್ಯೂ ಟೌನ್ನಲ್ಲಿ 7,000 ಜನರು ಮತ್ತು ಗೋದಾಮಿನಿಂದ 1,500 ಮೀಟರ್ ದೂರದಲ್ಲಿರುವ ಸದಾಯಂಕುಪ್ಪಂ ಎಂಬ ಹಳ್ಳಿಯಲ್ಲಿ 5 ,000 ಜನರು ವಾಸಿಸುತ್ತಿದ್ದಾರೆ ಎಂದು ಹೇಳಿದೆ. ಒಟ್ಟು 12,000 ಕ್ಕೂ ಹೆಚ್ಚು ಜನ ಈ ಕೈಗಾರಿಕಾ ಪ್ರದೇಶದ ಸುತ್ತ ಮುತ್ತ ವಾಸಮಾಡುತಿದ್ದಾರೆ.
ಆದರೆ ಸ್ಫೋಟಕ ವಸ್ತುಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೈಗೆತ್ತಿಕೊಳ್ಳುತ್ತಿರುವುದರಿಂದ ಭಯಭೀತರಾಗಲು ಯಾವುದೇ ಕಾರಣವಿಲ್ಲ, ಶೀಘ್ರದಲ್ಲೇ ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದ್ದಾರೆ.







