ಅಸ್ತವ್ಯಸ್ತಗೊಂಡ ಕೊಡಗು.. ಆತಂಕದಲ್ಲಿ ಮಡಿಕೆರಿಯ ಜನತೆ..!
ಕೊಡಗು ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ಕೊಡಗಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್, ರಸ್ತೆಗಳಿಲ್ಲದೆ ಓಡಾಡುವುದೇ ಕಷ್ಟಕರವಾಗಿದೆ. ಭೂಕುಸಿತ, ಜಲಾವೃತದಿಂದ ಜನರು ಜೀವ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಕುಶಾಲನಗರದ ಸಾಯಿ ಬಡವಾಣೆ ಮತ್ತು ಕುವೇಂಪು ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಜೀವ ನದಿ ಕಾವೇರಿ ರಭಸವಾಗಿ ಹರಿಯುತ್ತಿದೆ. ಮಡಿಕೇರಿಯ ಸುಮಾರು 52 ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಹಾಗೇ 14 ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ತಲಕಾವೇರಿಯ ಬ್ರಹ್ಮ ಗಿರಿ ಬೆಟ್ಟದಲ್ಲಿ ಭೂ ಕುಸಿತದಿಂದಾಗಿ ತಲಕಾವೇರಿಯ ಪ್ರಧಾನ ಆರ್ಚಕರ ಕುಟುಂಬ ಭೂ ಸಮಾಧಿಯಾಗಿದೆ.
ಈಗಾಗಲೇ ಮಡಿಕೇರಿಯಲ್ಲಿ 9 ಪರಿಹಾರ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಸುಮಾರು 591 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಡಿಕೇರಿಯಲ್ಲಿ ಇನ್ನೂ ಮಳೆ ನಿಂತಿಲ್ಲ. ಬಿಟ್ಟು ಬಿಟ್ಟು ಮಳೆ
ಬರುತ್ತಿದೆ. ಹೀಗಾಗಿ ಪರಿಹಾರ ಕಾರ್ಯಗಳಿಗೂ ಅಡಚಣೆಯಾಗುತ್ತಿದೆ. ಜಲ ಪ್ರವಾಹ ಮತ್ತು ಭೂ ಕುಸಿತದ ಭಯದಿಂದಾಗಿ ಜನರು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಾರೆ.
ಈಗಾಗಲೇ ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ, ಕೊಡಗು ಜಿಲ್ಲಾಧಿಕಾರಿ, ಅಧಿಕಾರಿಗಳು ಈಗಾಗಲೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.








