ರಾಯಚೂರು : ನಾರಾಯಣಪುರ ಜಲಾಶಯದಿಂದ 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ನದಿಗೆ ನೀರು ಬಿಡುವುದರಿಂದ ದೇವದುರ್ಗದ ಕೊಪ್ಪರ ಲಕ್ಷ್ಮೀ ನರಸಿಂಹ ದೇವಾಲಯ ಸಂಜೆಯ ವೇಳೆಗೆ ಸಂಪೂರ್ಣ ಜಲಾವೃತ ಆಗುವ ಭೀತಿ ಎದುರಾಗಿದೆ.
ಸದ್ಯ ದೇವಾಲಯ ಮೆಟ್ಟಿಲುವರಗೆ ನದಿ ನೀರು ಬಂದಿದ್ದು ದೇವಾಲಯ ಬಳಿಯೇ ವಾಸವಾಗಿರುವ ಕುಟುಂಬಗಳಿಗೆ ಪ್ರವಾಹ ಭೀತಿ ಉಂಟಾಗಿದೆ. ಜಲಾಶಯದಿಂದ ಹಂತ ಹಂತವಾಗಿ ಹೆಚ್ಚು ನೀರು ಬಿಡುವ ಮುನ್ಸೂಚನೆಯಿರುವ ಹಿನ್ನೆಲೆ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಾಗಿದೆ.
ಇದಲ್ಲದೆ ಕೃಷ್ಣಾ ನದಿಗೆ 2.20 ಲಕ್ಷ ಕ್ಯೂಸೆಕ್ ನೀರು ಹರಿಬಿಡುತ್ತಿರುವುದರಿಂದ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆ ಸಾಧ್ಯತೆ ಹೆಚ್ಚಾಗಿದೆ. 2.25 ಲಕ್ಷ ಕ್ಯೂಸೆಕ್ ನೀರು ಬಂದಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಲಿದೆ. ಈಗಾಗಲೇ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಆರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.








