ಮೈಸೂರು : ಕೇರಳದ ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಜಲಾಶಯದಿಂದ 75 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ. ಕಪಿಲಾ ನದಿಗೆ 75 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹರಿಸಿದ ಪರಿಣಾಮ ಮೈಸೂರು -ಊಟಿ ರಸ್ತೆಗೆ ನದಿ ನೀರು ನುಗ್ಗಿದೆ. ಇದರಿಂದ ವಾಹನ ಸಂಚಾರದಲ್ಲಿ ತುಸು ತೊಂದರೆ ಆಗಿದೆ. ಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸುತ್ತಿದ್ದು, ನಂಜನಗೂಡು ತಾಲೂಕು ಮಲ್ಲನ ಮೂಲೆ ಮಠದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ.
ಇನ್ನು ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ನಂಜನಗೂಡಿನ ಮಲ್ಲನಮೂಲೆ ಮಠದ ಬಳಿಯ ಬಸವೇಶ್ವರ ದೇವಾಲಯ ಜಲಾವೃತವಾಗಿದೆ. ಹೆಚ್ಚಿನ ಪ್ರಮಾಣದ ನೀರು ಬಿಟ್ಟರೆ ಮತ್ತಷ್ಟು ಮುಳುಗಡೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಮೈಸೂರು-ಸುತ್ತೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸುತ್ತೂರಿನಿಂದ ಮೈಸೂರು ಸೇರಿದಂತೆ ವಿವಿಧೆಡೆ ಪ್ರಯಾಣಿಸುವ ಪ್ರಯಾಣಿಕರಿಗೆ ತಾಯೂರು ಮಾರ್ಗದಿಂದ ಕುಪ್ಪೇಗಾಲ ಸೇತುವೆ ಮೂಲಕ ಸಾಗುವಂತೆ ಪೊಲೀಸರು ತಿಳಿಸಿದ್ದಾರೆ.








