ಬೆಂಗಳೂರು : ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅವರ ಕುರಿತು ಅಸಂಬದ್ಧ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯ ಕಾಂಗ್ರೆಸ್ ಸಮರ ಸಾರಿದೆ. ಯತ್ನಾಳ್ ಅವರು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಇಂದು ರಾಜ್ಯಪಾಲರನ್ನು ಭೇಟಿಯಾಗಲಿದೆ. ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ರಾಜ್ಯಪಾಲ ವಜೂಭಾಯಿ ವಾಲಾರನ್ನು ಭೇಟಿ ಮಾಡಲಿದೆ. ಈ ವೇಳೆ ಯತ್ನಾಳ್ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಅವಕಾಶ ನೀಡುವ ವಿಚಾರವಾಗಿ ರಾಜ್ಯಪಾಲರು ತಮ್ಮ ವಿಶೇಷಾಧಿಕಾರವನ್ನು ಬಳಸಬೇಕು ಎಂದು ನಿಯೋಗ ಮನವಿ ಮಾಡಲಿದೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸ್ವಾತಂತ್ರ‍್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರನ್ನು ಅವಮಾನಿಸಿದ ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲು ಘನತೆವೆತ್ತ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.








