ಬೆಂಗಳೂರು: ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಲು ಅವಕಾಶ ಕೋರಿ ಕಾಂಗ್ರೆಸ್ ನಿಯೋಗ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿದೆ. ರಾಜ್ಯ ಪಾಲರ ಭೇಟಿ ಬಳಿಕ ಮಾತನಾಡಿದ ಮಾಜಿ ಸಿ.ಎಂ ಸಿದ್ದರಾಮಯ್ಯ, ಬಸವನ ಗೌಡ ಪಾಟೀಲ್ ಯತ್ನಾಳ್ ರವರು ದೊರೆಸ್ವಾಮಿ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಇದು ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಅವಮಾನ ಮಾಡಿತಂತಾಗಿದೆ. ಅಲ್ಲದೆ ಯತ್ನಾಳ್ ಅವರು ಸ್ವಾತಂತ್ರ‍್ಯ ಹೋರಾಟಗಾರರಿಗೂ ಅಪಮಾನ ಮಾಡಿದ್ದಾರೆ ಎಂದು ಗುಡುಗಿದರು.
ಇನ್ನು ದೊರೆಸ್ವಾಮಿ ಅವರು ಗಾಂಧೀಜಿಯವರ ಕೊನೆಯ ಕೊಂಡಿ, ಅಂಥವರನ್ನು ಯತ್ನಾಳ್ ನಕಲಿ ಸ್ವಾತಂತ್ರ‍್ಯ ಹೋರಾಟಗಾರ. ಪಾಕಿಸ್ತಾನದ ಏಜೆಂಟ್ ಎಂದಿದ್ದಾರೆ. ಇದು ಸಂವಿಧಾನಕ್ಕೆ ಮಾಡುವ ಅಪಮಾನ. ಹೀಗಾಗಿ ಅಧಿವೇಶನದಲ್ಲಿ ಯತ್ನಾಳ್ ವಿರುದ್ಧ ಚರ್ಚೆ ನಡೆಸಲು ಅವಕಾಶ ಕೋರಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಇಷ್ಟೆ ಅಲ್ಲದೆ ಯತ್ನಾಳ್ ಅವರ ಹೇಳಿಕೆಯನ್ನು ಬಿಜೆಪಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನ ನೋಡಿದ್ರೆ ಇದರ ಹಿಂದೆ ದೊಡ್ಡ ಹುನ್ನಾರವೇ ಇದ್ದಂತಿದೆ. ಸ್ವಾತಂತ್ರ‍್ಯ ಎಲ್ಲರಿಗೂ ಇದೆ. ಅದನ್ನ ಬಿಜೆಪಿಯವರು ಕೇವಲ ಟೀಕೆ ಮಾಡೋಕೆ ಬಳಸಿಕೊಳ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.








