ಬೆಂಗಳೂರು : ಇಂದು 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಬೇರೆಯವರೊಂದಿಗೆ ಹೋಲಿಕೆ ಮಾಡಿ ಮಕ್ಕಳ ಮನಸ್ಸಿಗೆ ನೋವಾಗುವಂತೆ ಮಾಡಬೇಡಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಪೋಷಕರನ್ನು ಉದ್ದೇಶಿಸಿ ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿರುವ ಅವರು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದ್ದಾರೆ.
“ಆತ್ಮೀಯ ಪೋಷಕರೇ, ಇಂದು, (10-08-2020) ಮಧ್ಯಾಹ್ನ 3.30ರ ಹೊತ್ತಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುತ್ತದೆ. ತಮ್ಮ ಮೊಬೈಲಿಗೆ ಫಲಿತಾಂಶ ಬರಲಿದೆ. ಕೊರೊನಾ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂಬುದು ತಮಗೆ ತಿಳಿದಿರಲಿ. ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ. ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ. ಅವರು ಯಾವ ಕೋರ್ಸನ್ನು ಆಯ್ಕೆ ಮಾಡಿದ್ದರೂ ಆ ಕೋರ್ಸಿಗೆ ಸೇರಿಸಿ ಮುಂದೆ ಚೆನ್ನಾಗಿ ಓದಲು ಹೇಳಿ ಹಾಗೂ ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿರುತ್ತದೆ. ಮಗು ಮನೆಯ ಬೆಳಕು. ಆ ಬೆಳಕು ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಆಶಯ” ಎಂದು ಸಚಿವರು ಉಲ್ಲೇಖಿಸಿದ್ದಾರೆ.
https://www.facebook.com/nimmasuresh/posts/3713643031996348








