ಮೈಸೂರು : ಮೈಸೂರಿನಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ದಕ್ಷಿಣ ಕಾಶಿ ನಂಜನಗೂಡು ಯಥಾಸ್ಥಿತಿಗೆ ಮರಳಿದೆ. ಕಪಿಲಾ ನದಿಯಲ್ಲಿ ಪ್ರವಾಹ ತಗ್ಗಿದ ಪರಿಣಾಮ ನದಿ ತೀರದ ಜನರು ಪ್ರವಾಹದ ಆತಂಕದಿಂದ ನಿರಾಳರಾಗಿದ್ದಾರೆ. ಇನ್ನೂ ಪ್ರವಾಹ ತಗ್ಗಿದ ಹಿನ್ನೆಲೆ ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ಬಳಿ ವಾಹನ ಸಂಚಾರ ಸುಗಮವಾಗಿದೆ.
ಇನ್ನೂ ಈಗಾಗಲೇ ಪ್ರವಾಹಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಕಪಿಲಾ ನದಿಯ ಪ್ರವಾಹದ ನೀರಿಗೆ ಹಲವು ಮನೆಗಳು ಮುಳುಗಡೆಯಾಗಿ ಶಿಥಿಲಗೊಂಡಿವೆ. ತಗ್ಗುಪ್ರದೇಶಗಳಾದ ಹಳ್ಳದ ಕೇರಿ, ಒಕ್ಕಲಗೇರಿ, ತೋಪಿನ ಬೀದಿ, ಕುರುಬಗೇರಿ, ಸರಸ್ವತಿ ಕಾಲೋನಿ, ರಾಜಾಜಿ ಕಾಲೋನಿಯ ಮನೆಗಳಿಗೂ ನೀರು ನುಗ್ಗಿ ಹಾನಿಗೊಳಗಾಗಿವೆ. ಕಪಿಲಾನದಿಯ ಸ್ನಾನ ಘಟ್ಟ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಪರಶುರಾಮ ದೇವಾಲಯ, ಶನೇಶ್ವರ ದೇವಸ್ಥಾನ, ಚಾಮುಂಡೇಶ್ವರಿ ದೇವಾಲಯವೂ ಮುಳುಗಡೆಯಾಗಿತ್ತು. ಇದೀಗ ನೀರಿನ ಪ್ರಮಾಣ ಕಡಿಮೆಯಾಗಿ ,ಮುಳುಗಡೆಯಿಂದ ಮುಕ್ತವಾಗಿವೆ. ಕಪಿಲಾ ನದಿ ಅಂಚಿನಲ್ಲಿರುವ ಸಾರ್ವಜನಿಕ ಸ್ಮಶಾನಗಳಲ್ಲಿಯು ಕೂಡ ನೀರಿನ ಪ್ರಮಾಣ ಕಡಿಮೆಯಾಗಿದೆ. ಪ್ರವಾಹ ತಗ್ಗಿದ ಹಿನ್ನೆಲೆ ಗಂಜಿ ಕೇಂದ್ರದಲ್ಲಿರುವ ಸಂತ್ರಸ್ತರು ಮರಳಿ ಮನೆಗಳಿಗೆ ತೆರಳಲು ಸಿದ್ಧರಾಗುತ್ತಿದ್ದಾರೆ.








