ಬೆಂಗಳೂರು : 2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆ ಬರೆದ ಒಟ್ಟು 8,11,050 ವಿದ್ಯಾರ್ಥಿಗಳ ಪೈಕಿ 5,82,316 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.71.80 ಫಲಿತಾಂಶ ದಾಖಲಾಗಿದೆ. ಈ ಬಾರಿ 6 ಮಂದಿ 625 ಅಂಕ ಪಡೆದಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಸರಿಯಾಗಿ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ಫಲಿತಾಂಶದ ವಿವರಗಳನ್ನು ನೀಡಿದರು. ಇದೇ ವೇಳೆ ಕೊರೊನಾ ವೈರಸ್ ಸಂಕಷ್ಟದ ನಡುವೆ ಪರೀಕ್ಷೆ ಯಶಸ್ವಿಯಾಗಲು ಕಾರಣರಾದ ವಿದ್ಯಾರ್ಥಿಗಳು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಅಂಕಗಳ ಸರಾಸರಿ ತೆಗೆದುಕೊಂಡು ಅದರ ಶೇ 40ರಷ್ಟು ಅಂಕ ಪಡೆದು ಜಿಲ್ಲಾವಾರು ಶ್ರೇಯಾಂಕ ಪಟ್ಟಿ ಪ್ರಕಟಿಸಲಾಗಿದೆ. ಎ ಶ್ರೇಣಿಯಲ್ಲಿ 10 ಶೈಕ್ಷಣಿಕ ಜಿಲ್ಲೆಗಳು, ಬಿ ಶ್ರೇಣಿಯಲ್ಲಿ 20 ಶೈಕ್ಷಣಿಕ ಜಿಲ್ಲೆಗಳು, ಸಿ ಶ್ರೇಣಿಯಲ್ಲಿ 4 ಶೈಕ್ಷಣಿಕ ಜಿಲ್ಲೆಗಳಿವೆ.
ಒಟ್ಟು 8,11,050 ವಿದ್ಯಾರ್ಥಿಗಳ ಪೈಕಿ 5,82,316 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 37,457 ಮಂದಿ ಎ+ ಗ್ರೇಡ್. 1,05,345 ಮಂದಿ ಎ ಗ್ರೇಡ್. 1,47,801 ಮಂದಿ ವಿದ್ಯಾರ್ಥಿಗಳು ಬಿ+ ಗ್ರೇಡ್. 1,53,860 ಮಂದಿ ಬಿ ಗ್ರೇಡ್. 98,704 ಮಂದಿ ಸಿ+ ಗ್ರೇಡ್. 14,612 ಮಂದಿ ಸಿ ಗ್ರೇಡ್ ಪಡೆದಿದ್ದಾರೆ.








