ಬೆಂಗಳೂರು: ಬಿಎಸ್ ಎನ್ ಎಲ್ ಉದ್ಯೋಗಿಗಳನ್ನು ದೇಶದ್ರೋಹಿಗಳು ಎಂದ ಸಂಸದ ಅನಂತ್ ಕುಮಾರ್ ಅವರು ತಮ್ಮ ಅಯೋಗ್ಯತನವನ್ನು ತೋರಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಟ್ವೀಟ್ ನಲ್ಲಿ, “ಎಲ್ಲವನ್ನೂ ಖಾಸಗೀ ಮಾಲೀಕತ್ವಕ್ಕೆ ನೀಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರವು ತನಗೆ ಆಡಳಿತ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನೇರವಾಗಿ ಒಪ್ಪಿಕೊಂಡಿದೆ. ಇನ್ನು ಸರ್ಕಾರದ ಅಧೀನ ಸಂಸ್ಥೆಯಾದ ಬಿಎಸ್ ಎನ್ ಎಲ್ ಉದ್ಯೋಗಿಗಳನ್ನು ದೇಶದ್ರೋಹಿಗಳು ಎಂದ ಸಂಸದ ಅನಂತ್ ಕುಮಾರ್ ಅವರು ತಮ್ಮ ಅಯೋಗ್ಯತನವನ್ನು ತೋರಿದ್ದಾರೆ ಎಂದು ಬರೆದುಕೊಂಡಿದೆ.
ಸೋಮವಾರ ಕುಮಟಾದಲ್ಲಿ ಮಾತನಾಡಿದ ಸಂಸದರು, ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ. ಬಿಎಸ್ ಎನ್‌ಎಲ್ ಸರಿಪಡಿಸಲು ನಮ್ಮ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಸಮರ್ಪಕ ಸೇವೆ ನೀಡಲು ಬಿಎಸ್ ಎನ್ ಎಲ್ ಸಂಸ್ಥೆಯ ನೌಕರರಿಂದ ಸಾಧ್ಯವಾಗೋದಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳುಹಿಸುತ್ತೇವೆ ಎಂದು ಕಿಡಿ ಕಾರುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದರು.








