ಮತ್ತೊಮ್ಮೆ ಶಾಂತಿ ಮಂತ್ರ ಪಠಿಸಿದ ಚೀನಾ
ಬೀಜಿಂಗ್, ಅಗಸ್ಟ್ 11: ಭಾರತದೊಂದಿಗೆ ಶಾಂತಿ ಕಾಪಾಡುವುದು ರಾಜತಾಂತ್ರಿಕ ಆದ್ಯತೆಯಾಗಿದೆ ಎಂದು ಲಡಾಖ್ ಗಡಿ ಸಂಘರ್ಷದ ನಡುವೆ ಚೀನಾ ಹೇಳಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ವಿಶ್ವ ಮತ್ತು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಚೀನಾದ ರಾಜತಾಂತ್ರಿಕ ಆದ್ಯತೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಯುಎಸ್, ರಷ್ಯಾ, ಇಯು, ಜಪಾನ್ ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಮುಂದೆ ಸಾಗುವ ಚೀನಾದ ಪ್ರಸ್ತುತ ರಾಜತಾಂತ್ರಿಕ ಕಾರ್ಯ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಚೀನಾ-ಭಾರತ ನಡುವಿನ ಸೌಹಾರ್ದಯುತ ಸಂಬಂಧಗಳಿಗಾಗಿ, ಉಭಯ ಪಕ್ಷಗಳು ಜಂಟಿಯಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಬೇಕು ಮತ್ತು ದ್ವಿಪಕ್ಷೀಯ ಸಂಬಂಧಗಳ ದೀರ್ಘಕಾಲೀನ ಅಭಿವೃದ್ಧಿಗೆ ಮಹತ್ವವನ್ನು ನೀಡಬೇಕು ಎಂದು ಜಾವೋ ಲಿಜಿಯಾನ್ ಹೇಳಿದ್ದಾರೆ.
ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಚೀನಾ ಮತ್ತು ಭಾರತ ಸಂವಹನ ನಡೆಸುತ್ತಿವೆ ಎಂದು ಜಾವೋ ಲಿಜಿಯಾನ್ ಸುದ್ದಿ ಗೋಷ್ಟಿಯಲ್ಲಿ ಹೇಳಿದ್ದಾರೆ.








