ನವದೆಹಲಿ: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಫ್ರಾಂಚೈಸಿ, ತಂಡದ ಮಾಲೀಕರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಐಪಿಎಲ್ ಟೂರ್ನಿ ಪ್ರಶಸ್ತಿ ಮೊತ್ತದಲ್ಲಿ ಭಾರಿ ಪ್ರಮಾಣದ ಕಡಿತ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಬಿಸಿಸಿಐ ಐಪಿಎಲ್ ಪ್ರಶಸ್ತಿ ಮೊತ್ತದಲ್ಲಿ ಬರೊಬ್ಬರಿ ಶೇ.50ರಷ್ಟು ಕಡಿತ ಮಾಡಿದ್ದು, ಅದರಂತೆ ಚಾಂಪಿಯನ್ ತಂಡಕ್ಕೆ ಈ ಹಿಂದೆ ನೀಡಲಾಗುತ್ತಿದ್ದ 20 ಕೋಟಿ ರೂ ಬದಲಿಗೆ ಕೇವಲ 10 ಕೋಟಿ ರೂ ನೀಡಲು ನಿರ್ಧರಿಸಲಾಗಿದೆ. ಅಂತೆಯೇ ಈ ಹಿಂದೆ ರನ್ನರ್ ಅಪ್ ತಂಡಕ್ಕೆ ನೀಡಲಾಗುತ್ತಿದ್ದ 12.5 ಕೋಟಿ ರೂಗಳನ್ನು 6.25 ಕೋಟಿ ರೂಗಳಿಗೆ ಇಳಿಸಲಾಗಿದೆ. ಅಂತೆಯೇ ಸೆಮಿ ಫೈನಲ್ ನಲ್ಲಿ ಸೋಲುಕಂಡ ಕ್ವಾಲಿಫೈಯರ್ ತಂಡಗಳಿಗೆ ತಲಾ 4.3 ಕೋಟಿ ರೂ ನೀಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಬಿಸಿಸಿಐ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿದೆ.
ಇನ್ನು ಇದೇ ವೇಳೆ ತಂಡದ ಮಾಲೀಕರು ಮತ್ತು ಫ್ರಾಂಚೈಸಿ ವೆಚ್ಚದಲ್ಲಿಯೂ ಕಡಿತ ಮಾಡಲಾಗಿದ್ದು, ಪ್ರಸ್ತುತ ಎಲ್ಲ ಫ್ರಾಂಚೈಸಿಗಳೂ ಉತ್ತಮ ಆದಾಯದಲ್ಲಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿದ್ದು, ಈ ಹಿನ್ನಲೆಯಲ್ಲಿ ಫ್ರಾಂಚೈಸಿಗಳ ವೆಚ್ಚವನ್ನು 1 ಕೋಟಿಯಿಂದ 50 ಲಕ್ಷ ರೂಗೆ ಇಳಿಕೆ ಮಾಡಲಾಗಿದೆ.







