ಬೆಂಗಳೂರಲ್ಲಿ ಪುಂಡರ ಪುಂಡಾಟ – ಗಲಭೆ ಬಗ್ಗೆ ಸಿಎಂಗೆ ಡಿಜಿಪಿ ಮಾಹಿತಿ – ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಭದ್ರತೆ
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಮತ್ತು ಡಿ.ಜೆ. ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ಅವರು ಸಿಎಂ ಬಿಎಸ್‍ವೈ ವರದಿ ನೀಡಿದ್ದಾರೆ. ಈ ವೇಳೆ ತಪ್ಪಿತಸ್ಥರು ಯಾರೇ ಆಗಿರಲಿ, ಅವರನ್ನು ತಕ್ಷಣವೇ ಬಂಧಿಸಿ ಕ್ರಮತೆಗೆದುಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೆ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದು ಶಾಂತಿ ಕಾಪಾಡಬೇಕು. ಯಾವುದೇ ಅಹಿಕತರ ಘಟನೆಗಳು ನಡೆಯದಂತೆ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಡಿಜಿಪಿಗೆ ಸೂಚನೆ ನೀಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಭದ್ರತೆ
ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಭದ್ರತೆ ಒದಗಿಸುವಂತೆ ಸೂಚನೆ ನೀಡಿದ್ದಾರೆ. ಶಾಂತಿಯಿಂದ ಬದುಕಬೇಕು ಎಂಬುದೇ ನಮ್ಮ ಆಶಯವಾಗಿದೆ. ಆದ್ರೆ ಕೆಲವರಿಗೆ ಅಶಾಂತಿಯೇ ರಾಜಮಾರ್ಗವಾಗಿದೆ. ಆದ್ರೆ ಆ ಮಾರ್ಗವನ್ನು ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪೊಲೀಸ್ ವ್ಯವಸ್ಥೆ ಸದೃಢವಾಗಿದೆ. ನಿನ್ನೆ ರಾತ್ರಿ ನಡೆದ ಗಲಭೆ ನಡೆದ ಜಾಗದಲ್ಲಿ ಸ್ಥಳೀಯರು ಶಾಮೀಲು ಆಗಿರಬಹುದು ಎಂಬ ಅನುಮಾನವಿದೆ. ಸರ್ಕಾರ ಈ ದಿಶೆಯಲ್ಲೂ ತನಿಖೆ ಮಾಡಲಿದೆ. ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲೇ ಶಿಕ್ಷೆ ನೀಡಲಾಗುವುದು ಎಂದು ಸಿಎಂ ಬಿಎಸ್‍ವೈ ಹೇಳಿದ್ದಾರೆ.
ಈ ಗಲಭೆಯಲ್ಲಿ ಮೂವರು ಪೊಲೀಸರ ಗೋಲಿಬಾರ್‍ಗೆ ಬಲಿಯಾಗಿದ್ದಾರೆ. ಸುಮಾರು 110ಕ್ಕಿಂತ ಹೆಚ್ಚಿನ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಗಲಭೆಯ ಎ-1 ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಕೆ.ಜಿ.ಹಳ್ಳಿ ಮತ್ತು ಡಿ.ಜೆ. ಹಳ್ಳಿ ಏರಿಯಾಗಳು ಪೊಲೀಸರ ಹತೋಟಿಯಲ್ಲಿದೆ. ಈ ಏರಿಯಾಗಳಲ್ಲಿ ಕಫ್ಯೂ ವಿಧಿಸಲಾಗಿದೆ.








