ಪುರಾಣ ಪ್ರಸಿದ್ಧ ಕಂಭುಜ ದೇಶವೆಂಬ ಕಾಂಬೋಡೊಯಾದಲ್ಲೊಂದು ವಿಷ್ಣುಲೋಕ ಆಂಕೋರ್ ವಾಟ್ ದೇವಾಲಯ:
ಹಿಂದೂಧರ್ಮವು ಭಾರತದಾಚೆಗೂ ಸಹ ಹರಡಿದ ವಿಶಾಲ ಧರ್ಮ. ಇದರ ಕುರುಹುಗಳು ಭಾರತದಿಂದ ಸಹಸ್ರಾರು ಮೈಲುಗಳಾಚೆಗೂ ಸಹ ಪಸರಿಸಿವೆ. ಅಂತಹ ರೋಚಕ ಹಾಗೂ ಕೌತುಕಭರಿತ ಕುರುಹುಗಳಲ್ಲಿ ಈಗಿನ ಕಾಂಬೋಡಿಯಾ ದೇಶದ ಆಂಕೋರ್ ವಾಟ್ ನ ಬೃಹತ್ ಹಿಂದೂ ದೇವಾಲಯ ಸಹ ಒಂದು. ಈ ದೇವಾಲಯ ಭಾರತದಾಚೆಗೂ ಇರುವ ಅತಿ ಪುರಾತನವಾದ ಹಿಂದೂ ದೇವಾಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹಲವು ಸಂಗತಿಗಳಲ್ಲಿ ವಿಶೇಷವೆನ್ನಿಸಿದ ಈ ಪ್ರಾಚೀನ ದೇಗುಲದ ಕುರಿತಾದ ಒಂದಷ್ಟು ಸ್ವಾರಸ್ಯಕರ ವಿವರಗಳನ್ನ ತಿಳಿಯೋಣ ಬನ್ನಿ.
ಇದು ಇರುವುದು ಈಗಿನ ಕಾಂಬೋಡಿಯಾದ ಸಯಾಮ್ ರೀಪ್ ಎಂಬ ನಗರದಲ್ಲಿ. ಅದರ ಉತ್ತರಕ್ಕಿರುವ ಮೌಂಟ್ ಮೇರು ಅಥವಾ ಸುಮೇರು ಪರ್ವತಕ್ಕೆ ಅಭಿಮುಖವಾಗಿ ನಿಂತಿರುವ ಈ ದೇಗುಲ ಸುಮಾರು 250 ಮೀಟರ್ ನಷ್ಟು ಉದ್ದ ಇರುವ ಎತ್ತರದ ಸ್ಮಾರಕ. ಅಂದಿನ ಕಾಂಬೋಡಿಯಾವನ್ನ ಕಾಂಭುಜ ಅಥವಾ ಕಂಭುಜ ದೇಶ ಎಂದು ಕರೆಯಲಾಗುತ್ತಿತ್ತು. ಹಾಗೂ ಇದು ನಮ್ಮ ಮಹಾಭಾರತದಲ್ಲಿ ಬರುವ 56 ದೇಶ ಅಥವಾ ಪ್ರಾಂತ್ಯಗಳಲ್ಲಿ ಒಂದಾಗಿತ್ತು ಎಂಬುದು ಇತ್ತೀಚಿನ ಅಧ್ಯಯನಗಳಿಂದ ಸಾಬೀತಾಗಿದೆ. ಇಲ್ಲಿಯವರೆಗೂ ಹಬ್ಬಿದ್ದ ಭಾರತದ ಸಂಸ್ಕೃತಿಯು ಈ ಪ್ರಾಂತ್ಯಗಳಲ್ಲೆಲ್ಲಾ ಹಿಂದೂ ಧರ್ಮದ ಆಚರಣೆಗಳ ಪರಿಚಯಕ್ಕೆ ನಾಂದಿ ಹಾಡಿತ್ತು.
ಖ್ಮರ್ ಸಾಮ್ರಾಜ್ಯದ ಹಿಂದೂ ಅರಸನಾಗಿದ್ದ ಎರಡನೇ ಸೂರ್ಯವರ್ಮನ್ ಎಂಬುವವನಿಂದ ಕ್ರಿ ಶ 1113 ರಲ್ಲಿ ಪ್ರಾರಂಭವಾದ ಈ ಆಂಕೋರ್ ವಾಟ್ ನ ದೇವಾಲಯದ ನಿರ್ಮಾಣ ಕಾರ್ಯ ಕ್ರಿ ಶ 1150 ರ ಹೊತ್ತಿಗೆ ಪೂರ್ಣಗೊಂಡಿತು. ಈ ಅರಸರು ಮೂಲತಃ ಹಿಂದೂಗಳಾಗಿದ್ದು ಇವರು ವಿಷ್ಣುವಿನ ಆರಾಧಕರಾಗಿದ್ದರು. ಹೀಗಾಗಿ ಈ ಆಂಕೋರ್ ವಾಟ್ ನ ದೇವಸ್ಥಾನವು ಮೊದಲು ವಿಷ್ಣುವಿನ ಪೂಜಾಸ್ಥಳವಾಗಿತ್ತು. ಆಂಕೋರ್ ವಾಟ್ ಎಂದರೆ ಖ್ಮರ್ ಭಾಷೆಯಲ್ಲಿ ದೇವಾಲಯಗಳ ನಗರ ಎಂದರ್ಥ. ಕ್ರಿ ಶ 15 ನೇ ಶತಮಾನದವರೆಗೂ ಈ ಸ್ಥಳಕ್ಕೆ ವಿಷ್ಣುಲೋಕ ಎಂದೇ ಕರೆಯುತ್ತಿದ್ದರು. ಆದರೆ 12 ನೇ ಶತಮಾನದ ಬೌದ್ಧ ಧರ್ಮೀಯರ ಅತಿಕ್ರಮಣದಿಂದಲು ಹಾಗೂ ಹಿಂದೂ ಧರ್ಮದ ಪ್ರಾಬಲ್ಯದ ಕುಸಿತದಿಂದಲೂ ಈ ವಿಷ್ಣು ಮಂದಿರ ಬೌದ್ಧ ಬಸದಿಯಾಗಿ ಬದಲಾಗಿ ಇದರ ಹೆಸರು ಅಲ್ಲಿನ ಖ್ಮರ್ ಭಾಷೆಯಲ್ಲಿ ಆಂಕೋರ್ ವಾಟ್ ಆಯಿತು.
ಇದು ಕ್ರಿ.ಶ ಹನ್ನೆರಡನೇ ಶತಮಾನದ ಪ್ರಾರಂಭದಲ್ಲಿ ಎರಡನೇ ಸೂರ್ಯವರ್ಮನ್ ನಿಂದ ಶುರುವಾಗಿ ಅದೇ ವಂಶದ ಏಳನೇ ಜಯವರ್ಮನ್ ಎಂಬ ಅರಸನಿಂದ ಪೂರ್ಣವಾಯ್ತು. ಈ ಬೃಹತ್ ಪಂಚ ಗೋಪುರವುಳ್ಳ ದೇವಾಲಯಗಳನ್ನ ಪೂರ್ಣಗೊಳಿಸಲು ಖ್ಮರ್ ಅರಸರಿಗೆ ಮೂರು ದಶಕಗಳೆ ತಗುಲಿದವು. ಜಯವರ್ಮನ್ ಕಾಲಕ್ಕಾಗಲೇ ಈ ಖ್ಮರ್ ಸಾಮ್ರಾಜ್ಯವು ಇದರ ಕಟ್ಟಾ ವಿರೋಧಿಗಳಾದ ಚೀನಾದ ಚಾಮ್ ಮನೆತನದವರ ವಶಕ್ಕೊಳಪಟ್ಟಿತು. ಹನ್ನೆರಡನೇ ಶತಮಾನದ ಕೊನೆಯ ವೇಳೆಗಾಗಲೇ ಇದು ಅಲ್ಲಿನ ಬೌದ್ಧ ಮತದ ಪ್ರಾರ್ಥನಾ ಮಂದಿರವಾಗಿ ಬದಲಾಗಿತ್ತು.
ಇದು ಕಾಂಬೋಡಿಯಾ ದೇಶದ ಪ್ರಾತಃಸ್ಮರಣೀಯ ಕೇಂದ್ರವಾಗಿದ್ದರೂ ಸಹ ಚಾಮ್ ಮನೆತನದವರ ಆಕ್ರಮಣದ ಬಳಿಕ ವ್ಯಾಪಕವಾಗಿ ಕಡೆಗಣಿಸಲ್ಪಟ್ಟ ಸ್ಮಾರಕ ಎನಿಸಿಕೊಂಡಿತು. ಆಂಕೋರ್ ವಾಟ್ ಗೆ ಭೇಟಿಯಿತ್ತ ಮೊಟ್ಟ ಮೊದಲ ಪಾಶ್ಚಿಮಾತ್ಯ ಯಾತ್ರಿಕನೆಂದರೆ ಪೋರ್ಚುಗಲ್ ನ ಆಂಟೋನಿಯೊ ಡ ಮಾಡಲೇನ ಎಂಬಾತ. ಈತ ಇಲ್ಲಿಗೆ ಇಸವಿ 1586 ರಲ್ಲಿ ಭೇಟಿ ಕೊಟ್ಟು ಇದರ ವೈಭವ ಹಾಗೂ ವೈಶಾಲ್ಯತೆಯ ಬಗ್ಗೆ ಹೀಗೆ ಹೇಳಿದ್ದಾನೆ.
‘
ಈ ಸ್ಮಾರಕವು ನಾನಿದುವರೆಗೂ ಎಲ್ಲಿಯೂ ನೋಡಿರದ ಒಂದು ಅದ್ಭುತವಾದ ಮಾಯಾ ಲೋಕ. ಇದರ ಸೌಂದರ್ಯವನ್ನ ವರ್ಣಿಸಲು ಪದಗಳೆ ಇಲ್ಲ. ಇದು ಐದಾರು ಎತ್ತರದ ಗೋಪುರಗಳ ಒಂದು ದಿವ್ಯ ಮಂದಿರ. ವಿಶ್ವದಲ್ಲಿಯೇ ಇಂಥ ಇನ್ನೊಂದು ಸ್ಮಾರಕ ಇರಲು ಸಾಧ್ಯವಿಲ್ಲ. ಇದರ ಸುಂದರ ಕೆತ್ತನೆ, ಶೃಂಗಾರ ಹಾಗೂ ಅಮೋಘವಾದ ಶಿಲ್ಪಕಲೆ ಇದು ದೇವಲೋಕದ ಶಿಲ್ಪಿಗಳಿಂದಲೇ ನಿರ್ಮಾಣವಾಯ್ತೇನೊ ಎಂಬ ಭ್ರಮೆ ಹುಟ್ಟಿಸುತ್ತವೆ.
17 ಹಾಗೂ 18ನೇ ಶತಮಾನಗಳಲ್ಲಿ ಆಗೀಗ ಜಪಾನೀ ಹಾಗೂ ವಿಶ್ವದ ಇತರೆ ಯಾತ್ರಿಕರ ಕಣ್ಣಿಗಿದು ಬಿದ್ದರೂ ಸಹ ತೆರೆಮರೆಯಲ್ಲೇ ಉಳಿಯಿತು. ಆದರೆ 1860 ರಲ್ಲಿ ಹೆನ್ರಿ ಮೌಹಟ್ ಎಂಬ ಫ್ರೆಂಚ್ ಪರಿಸರವಾದಿ ಹಾಗೂ ಪ್ರವಾಸಿಯಿಂದ ಈ ಲೋಕ ವಿಖ್ಯಾತ ಆಂಕೋರ್ ವಾಟ್ ಮತ್ತೊಮ್ಮೆ ಅತ್ಯಂತ ಯಶಸ್ವಿಯಾಗಿ ಪುನರ್ ಜೀವ ಪಡೆಯಿತೆನ್ನಬಹುದು. ಈತ ಈ ಅತ್ಯದ್ಭುತವಾದ ದೇವಾಲಯವನ್ನ ಗುರುತಿಸಿ ಇದರ ಬಗ್ಗೆ ಪಾಶ್ಚಿಮಾತ್ಯ ಜಗತ್ತಿಗೆ ತನ್ನ ಪ್ರವಾಸ ಕಥನಗಳ ಮೂಲಕ ಸ್ಪಷ್ಟವಾಗಿ ಜಾಹೀರು ಮಾಡಿದ.
‘ನಾವೆಲ್ಲಾ ರಿನೈಸನ್ಸ್ ಸುಧಾರಣೆಯಲ್ಲಿ ತಲೆಯೆತ್ತಿದ ಗ್ರೀಕ್ ಹಾಗೂ ರೋಮನ್ ಶಿಲ್ಪಗಳನ್ನ ಹಾಗೂ ಮೈಕೆಲಾಂಜೆಲೊ ಎಂಬ ಶಿಲ್ಪಿಗಳ ಸಾಧನೆಯನ್ನಷ್ಟೇ ನೋಡಿದ್ದೆವು. ಆದರೆ ಕಾಂಬೋಡಿಯಾದ ಈ ಆಂಕೋರ್ ವಾಟ್ ಅವುಗಳನ್ನು ಸಹ ಮೀರಿಸುತ್ತದೆ. ಆದರೆ ದುಷ್ಟ ಅತಿಕ್ರಮಣದಿಂದ ಘಾಸಿಗೊಳಗಾದ ಈ ದೇಗುಲದ ಸೌಂದರ್ಯದ ನಾಶವು ಅತ್ಯಂತ ವಿಷಾದಕರ ಸಂಗತಿ.’ ಎಂದು ಹೆನ್ರಿ ಅಭಿಪ್ರಾಯ ಪಟ್ಟಿದ್ದಾನೆ. ಈ ದೇವಾಲಯವು ಒಟ್ಟು ಇನ್ನೂರು ಹೆಕ್ಟೇರ್ ಗಳನ್ನ ಆಕ್ರಮಿಸಿದ ಬೃಹತ್ ಪೂಜಾ ಕೇಂದ್ರ. ಈ ದೇವಾಲಯದ ಭವ್ಯ ಕೆತ್ತನೆ ಇಂದಿನ ಹಲವು ಪ್ರಾಚ್ಯ ತಜ್ಞರನ್ನ ದಂಗು ಪಡಿಸಿದೆ. ಸುಮಾರು 3 ಸಾವಿರ ಆನೆಗಳು ಹಾಗೂ 5 ಲಕ್ಷ ಸೇವಾನಿರತ ಶಿಲ್ಪಿಗಳು ಹಾಗೂ ಇತರೆ ಶ್ರಮಿಕ ವರ್ಗದ ಸಹಾಯದಿಂದ ಈ ದೇವಾಲಯದ ಕಾರ್ಯ ನೆರವೇರಿದೆ ಎಂದು ಅಂದಾಜಿಸಲಾಗಿದೆ.
ಈ ದೇವಾಲಯ ಈಗ ಹಲವಾರು ಬೌದ್ಧ ಭಿಕ್ಖುಗಳ ಬಸದಿಯಾಗಿದ್ದರೂ ಸಹ ಇಲ್ಲಿನ ಸಾಕಷ್ಟು ಕೆತ್ತನೆಗಳು ಹಾಗೂ ವಿಗ್ರಹಗಳು ನಮ್ಮ ಹಿಂದೂ ಮೂರ್ತಿಗಳನ್ನ ಹಾಗೂ ಹಿಂದೂ ಪುರಾಣದ ನಾನಾ ಕತೆಗಳನ್ನೇ ಬಿಂಬಿಸುತ್ತವೆ. ಬ್ರಹ್ಮ ಹಾಗೂ ದೇವೇಂದ್ರರ ಶಿಲ್ಪಗಳು.. ಮುಖ್ಯ ಗರ್ಭಗುಡಿಯಲ್ಲಿ ಈಗಲು ನಿಂತಿರುವ ಗದಾಹಸ್ತನಾದ ಶ್ರೀ ವಿಷ್ಣುವಿನ ಮೂರ್ತಿ ಹಾಗೂ ದೇಗುಲದ ಬಾಹ್ಯದಲ್ಲಿ ಕೆತ್ತಲಾದ ಕ್ಷೀರ ಸಾಗರ ಕಡೆಯುವ ಪ್ರಸಂಗದ ಕೆತ್ತನೆಗಳು ಹಿಂದೂ ಪುರಾಣಗಳಿಗೆ ಹಿಡಿದ ಕನ್ನಡಿಯಂತಿವೆ. ಸುಮಾರು 200 ಕ್ಕು ಹೆಚ್ಚು ನಗುವ ಭವ್ಯ ಮೂರ್ತಿಗಳ ಪ್ರತಿಷ್ಠಾಪನೆಯಿರುವುದು ಈ ದೇವಸ್ಥಾನದ ವಿಶೇಷತೆಗಳಲ್ಲೊಂದು.
ಇನ್ನೊಂದು ವಿಶೇಷತೆಯೆಂದರೆ. ಇದು ಇತರೆ ಹಿಂದೂ ದೇಗುಲಗಳಂತೆ ಪೂರ್ವಕ್ಕೆ ಸೂರ್ಯೋದಯಕ್ಕೆ ಅಭಿಮುಖವಾಗಿಲ್ಲ. ಬದಲಿಗೆ ಇದರ ಮುಖ್ಯ ಗರ್ಭಗುಡಿ ಪಶ್ಚಿಮಕ್ಕೆ ಸೂರ್ಯಾಸ್ತಕ್ಕೆ ಅಭಿಮುಖವಾಗಿದೆ. ಸೂರ್ಯಾಸ್ತವು ಸರಿಯಾಗಿ ಈ ದೇವಾಲಯದ ಗರ್ಭಗುಡಿಯ ನಟ್ಟನಡುವೆಯೇ ಸಂಭವಿಸುತ್ತದೆ ! ಸಂಜೆಯ ಸೂರ್ಯನ ತೆಳು ಬಿಸಿಲಿನ ರಶ್ಮಿಗಳಿಂದ ದೇವಾಲಯವು ಕಂಗೊಳಿಸುವ ಮೂಲಕ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಮೂರು ಲಕ್ಷಕ್ಕು ಹೆಚ್ಚು ಸ್ಯಾಂಡ್ ಇಟ್ಟಿಗೆಗಳು ಈ ದೇಗುಲದ ಕಾರ್ಯಕ್ಕೆ ಬಳಕೆಯಾಗಿವೆ. ಎಂಭತ್ತು ತೊಂಭತ್ತರ ದಶಕದಲ್ಲಿ ಕೇವಲ ನಾಲ್ಕೈದು ಸಾವಿರದಷ್ಟಿದ್ದ ಇದರ ಪ್ರವಾಸಿಗರ ಸಂಖ್ಯೆ ಇಂದು ವರ್ಷಕ್ಕೆ 5 ಲಕ್ಷಕ್ಕು ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ.
1992 ರಲ್ಲಿ ಯುನೆಸ್ಕೊ ಈ ದೇವಾಲಯವನ್ನ ಅದರ ಚರಿತ್ರಾರ್ಹ ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಿದೆ. ಈ ದೇವಾಲಯದ ಶುದ್ಧಿ ಹಾಗೂ ಸುಧಾರಣೆಗೆ ಕಾಂಬೋಡಿಯಾದ ಸರ್ಕಾರ ಮುತುವರ್ಜಿ ವಹಿಸಿದೆ. ಈ ಎತ್ತರದ ದೇವಾಲಯಗಳ ಗೋಪುರಗಳ ಮೇಲೆ ಅಲ್ಲಿನ ಮಳೆಯಿಂದಾಗಿ ಬೆಳೆಯುವ ಗಿಡ ಗೆಂಟೆಗಳನ್ನ ಕತ್ತರಿಸೋದು ಬಹುದೊಡ್ಡ ತ್ರಾಸಿನ ಕೆಲಸ. ಅನುಭವಿ ಶ್ರಮಿಕರು ಏಣಿಗಳನ್ನ ಬಳಸಿ ಈ ದೇವಾಲಯದ ತುದಿಯವರೆಗು ಹತ್ತಿ ಅವುಗಳನ್ನ ಕತ್ತರಿಸಿ ಸ್ವಚ್ಛಗೊಳಿಸುವ ಸಾಹಸಕ್ಕಿಳಿಯುತ್ತಾರೆ. ಸಾವಿರಾರು ವರ್ಷಗಳಿಂದ ಭೂಮಿಯ ಸಹಸ್ರಾರು ಬದಲಾವಣೆಗಳಿಗೆ ಹಾಗೂ ನಿಸರ್ಗದ ಹಲವು ಒತ್ತಡಗಳಿಗೆ ಸಾಕ್ಷಿಯಾಗಿ ಸೆಟೆದು ನಿಂತಿರುವ ಈ ಆಂಕೋರ್ ವಾಟ್ ಕಾಲ ಧರ್ಮ ಹಾಗೂ ದೇಶಗಳನ್ನ ಮೀರಿದ ಒಂದು ಅಮೋಘ ಸ್ಮಾರಕ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ
ಮಾಹಿತಿ ಸಂಗ್ರಹ ಮತ್ತು ಲೇಖನ : ಇಂದೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)









