ರಾಯಚೂರು : ನಾನು ರಾಜಕೀಯ ಸನ್ಯಾಸಿಯಲ್ಲ. ಆದರೆ ಸದ್ಯಕ್ಕೆ ನಾನು ಸಿಎಂ ಆಗುವ ಯಾವ ಪ್ರಸ್ತಾವವೂ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಸಚಿವ ಸಂಪುಟ ಸಭೆ ಬಳಿಕ ಗಣೇಶ ಉತ್ಸವದ ಬಗ್ಗೆ ಚಿಂತನೆ ಮಾಡಲಾಗುವುದು. ನಾನು ಮೊನ್ನೆ ದೆಹಲಿಗೆ ಹೋಗಿದ್ದು, ನನ್ನ ಇಲಾಖೆ ಕಾರ್ಯಗಳಿಗೆ. ಒಂದು ವರ್ಷದ ಬಿಜೆಪಿ ಅಧಿಕಾರ ಪೂರೈಸಿದ ಹಿನ್ನೆಲೆ ನಾನು ದೆಹಲಿಗೆ ಹೋಗಿದ್ದೆ. ಆಸೆ ಸನ್ಯಾಸಿಗಳನ್ನೂ ಬಿಟ್ಟಿಲ್ಲ. ನಾನು ರಾಜಕೀಯ ಸನ್ಯಾಸಿಯಲ್ಲ. ಆದರೆ ಸದ್ಯಕ್ಕೆ ನಾನು ಸಿಎಂ ಆಗುವ ಯಾವ ಪ್ರಸ್ತಾವವೂ ಇಲ್ಲ. ಯಡಿಯೂರಪ್ಪನವರು ಮುಂದಿನ ಮೂರು ವರ್ಷಕಾಲ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಸವದಿ ಹೇಳಿದ್ದಾರೆ.
ಇದೇ ವೇಳೆ ಸಾರಿಗೆ ಇಲಾಖೆ ಬಗ್ಗೆ ಕೆಲ ವಿವರಗಳನ್ನು ನೀಡಿದ ಡಿಸಿಎಂ, ಸದ್ಯ ಸಾರಿಗೆ ಇಲಾಖೆ ಭಾರೀ ನಷ್ಟದಲ್ಲಿದೆ. ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಸಾರಿಗೆ ಬಸ್ ಓಡಾಡಿಸುತ್ತಿದ್ದೇವೆ. ಸಾರಿಗೆ ಇಲಾಖೆಯ ಒಟ್ಟು ಸಿಬ್ಬಂದಿ 1 ಲಕ್ಷ 30 ಸಾವಿರ ಜನರಿಗೆ ತಿಂಗಳಿಗೆ 326 ಕೋಟಿ ಸಂಬಳವಾಗುತ್ತದೆ. ಸರ್ಕಾರದ ಖಜಾನೆಯಿಂದ ಸಂಬಳ ಕೊಡಲು ಸಿಎಂಗೆ ಮನವಿ ಮಾಡಿದ್ದೇವೆ. ಹಣಕಾಸಿನ ತೊಂದರೆಯಿರುವುದರಿಂದ ಎರಡು ತಿಂಗಳ ಸಂಬಳವನ್ನು 75:25 ಅನುಪಾತದಲ್ಲಿ ಕೊಡಲು ಮನವಿ ಮಾಡಲಾಗಿದೆ. 25 ಪ್ರತಿಶತ ಸಂಬಳ ಮಾತ್ರ ನಿಗಮ ಕೊಡಲು ಸಾಧ್ಯವಾಗುತ್ತದೆ. ಸಿಬ್ಬಂದಿ ಸಂಬಳವನ್ನು ಕಷ್ಟಕಾಲದಲ್ಲೂ ಕೊಡುತ್ತೇವೆ ಎಂದರು.









