ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ರೇಬಿಸ್ ಹೆಲ್ಪ್ಲೈನ್ ಬಿಡುಗಡೆ ಮಾಡಿದೆ ಎಂದು ಪಾಲಿಕೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ.
ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಆಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ನಾಯಿ ಕಚ್ಚಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಮೂರು ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ನಾಯಿ ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಲಿದ್ದು, ನಾಯಿಯನ್ನು ಹಿಡಿದು ಆ ನಾಯಿಗೆ ರೇಬಿಸ್ ಟೆಸ್ಟ್ ಮಾಡಲಾಗುವುದು. ಇದರ ಜತೆಗೆ ಆ ಭಾಗದಲ್ಲಿರುವ ಎಲ್ಲ ನಾಯಿಗಳಿಗೂ ರೇಬಿಸ್ ವ್ಯಾಕ್ಸಿನೇಷನ್ ಮಾಡಲಾಗುವುದು ಎಂದಿದ್ದಾರೆ.








