13 ವರ್ಷದ ಬಾಲಕಿಯನ್ನು 35 ವರ್ಷದ ವ್ಯಕ್ತಿ ವಿವಾಹವಾಗುವುದರಿಂದ ರಕ್ಷಿಸಿದ ಪೊಲೀಸರು
ಉದಂಪೂರ್, ಅಗಸ್ಟ್ 16: ಜಮ್ಮು ಕಾಶ್ಮೀರದ ಉದಂಪೂರ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ 13 ವರ್ಷದ ಬಾಲಕಿಯನ್ನು 35 ವರ್ಷದ ವ್ಯಕ್ತಿ ವಿವಾಹವಾಗುವುದನ್ನು ಜಮ್ಮು- ಕಾಶ್ಮೀರದ ಪೊಲೀಸರು ಶುಕ್ರವಾರ ತಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಟ್ವಾಲ್ಟ್ ಗ್ರಾಮದ ಸರ್ಪಂಚ್’ನಿಂದ ಅಪ್ರಾಪ್ತ ಬಾಲಕಿಯನ್ನು 35 ವರ್ಷದ ವ್ಯಕ್ತಿಯೊಂದಿಗೆ ಗಘೋಟ್‌ನಲ್ಲಿ ಬಲವಂತವಾಗಿ ಮದುವೆ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಪೊಲೀಸ್ ತಂಡ ಕೂಡಲೇ ಆ ಸ್ಥಳದ ಮೇಲೆ ದಾಳಿ ನಡೆಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದರು.

ಅವರಲ್ಲಿ ಬಾಲಕಿಯ ಹುಟ್ಟಿದ ದಿನಾಂಕದ ಪುರಾವೆ ಕೇಳಿದಾಗ, ಆಕೆಗೆ ಕೇವಲ 13 ವರ್ಷ ಎಂದು ತಿಳಿದುಬಂದಿದೆ ಎಂದು ಉದಂಪೂರ್ ಎಸ್‌ಎಸ್‌ಪಿ ಸರ್ಗುನ್ ಶುಕ್ಲಾ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ವಿವಾಹವನ್ನು ಏರ್ಪಡಿಸಿದಕ್ಕೆ ಎಸ್’ಎಚ್’ಒ ರಾಮನಗರ ನೇತೃತ್ವದ ಪೊಲೀಸ್ ತಂಡ ಕೂಡಲೇ ಬಾಲಕಿಯ ಪೋಷಕರು, ವರ ಸೇರಿದಂತೆ ಆರು ಜನರನ್ನು ಬಂಧಿಸಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9/10/11 ರ ಅಡಿಯಲ್ಲಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಯ ತಾಯಿಯ ಚಿಕ್ಕಮ್ಮ ಶಾನೋ ದೇವಿಯ ವಿನಂತಿಯ ಮೇರೆಗೆ ಉದಂಪೂರದ ಮಕ್ಕಳ ಕಲ್ಯಾಣ ಸಮಿತಿ ಅವರಿಗೆ ಬಾಲಕಿಯನ್ನು ಹಸ್ತಾಂತರಿಸಿದೆ ಎಂದು ಎಸ್ಎಸ್ಪಿ ತಿಳಿಸಿದೆ.
ಜವಾಬ್ದಾರಿಯುತ ನಾಗರಿಕ ಮತ್ತು ಸಾರ್ವಜನಿಕ ಪ್ರತಿನಿಧಿಯ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಪೊಲೀಸರು ಸರ್ಪಂಚ್ ಅನ್ನು ಶ್ಲಾಘಿಸಿದ್ದು ಮತ್ತು ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆ.








