ವಿಶ್ವ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹೆಜ್ಜೆ ಗುರುತುಗಳು…!
ಅದು ಸರಿ ಸುಮಾರು 16 ವರ್ಷಗಳ ಸುದೀರ್ಘ ಕ್ರಿಕೆಟ್ ಜರ್ನಿ. ಹಾಗಂತ ಈ ಕ್ರಿಕೆಟ್ ಪಯಣದ ಹಾದಿ ಸುಗಮವೇನು ಆಗಿರಲಿಲ್ಲ. ಅನೇಕ ಏಳು ಬೀಳುಗಳ ನಡುವೆಯೂ ದಿಟ್ಟ ಹೆಜ್ಜೆಯನ್ನಿಟ್ಟ ಚಾಣಕ್ಯ ನಾಯಕ ಮಹೇಂದ್ರ ಸಿಂಗ್ ಧೋನಿ.
2004ರಲ್ಲಿ ಟೀಮ್ ಇಂಡಿಯಾದ ಗರ್ಭ ಗುಡಿ ಪ್ರವೇಶಿಸಿದ್ದ ಧೋನಿ ಕೇವಲ ಮೂರೇ ಮೂರು ವರ್ಷಗಳಲ್ಲಿ ಟೀಮ್ ಇಂಡಿಯಾದ ಸಾರಥಿಯಾದ್ರು. ಆಟಗಾರನಾಗಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಒಂದು ಸವಾಲಾದ್ರೆ, ನಾಯಕನಾಗಿ ತಂಡವನ್ನು ಮುನ್ನಡೆಸುವುದು ಅದಕ್ಕಿಂತ ದೊಡ್ಡ ಸವಾಲು. ಯುವ ಆಟಗಾರರ ಜೊತೆ ಹಿರಿಯ ಆಟಗಾರರನ್ನು ಸಂಭಾಳಿಸಿಕೊಂಡು ಹೋಗುವುದು ಧೋನಿಗೆ ಸುಲಭದ ಸಂಗತಿಯಾಗಿರಲಿಲ್ಲ.
ಅದು ಅಲ್ಲದೆ ಸಚಿನ್, ಗಂಗೂಲಿ, ದ್ರಾವಿಡ್, ಅನಿಲ್ ಕುಂಬ್ಳೆ, ಲಕ್ಷ್ಮಣ್ ನಂತಹ ಹಿರಿಯರ ಆಟಗಾರರು, ಶ್ರೀಶಾಂತ್‍ನಂತಹ ಮಕ್ಕಳಾಟದ ಆಟಗಾರರು, ಸೆಹ್ವಾಗ್, ಗಂಭೀರ್, ಯುವರಾಜ್ ಸಿಂಗ್‍ನಂತಹ ಮುಂಗೋಪಿ ಆಟಗಾರರ ಮನವನ್ನು ಒಲಿಸಿಕೊಂಡು ತಂಡದ ಯಜಮಾನನಾಗಿ ಮುನ್ನಡೆಸಿದ್ದ ರೀತಿಯಂತೂ ಅದ್ಭುತವೇ ಸರಿ.
ಈ ನಡುವೆ, ತಂಡದ ಗೇಮ್ ಪ್ಲಾನ್, ಡ್ರೆಸಿಂಗ್ ರೂಮ್ ವಾತಾವರಣ ಹೀಗೆ ಒತ್ತಡಗಳ ನಡುವೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಶ್ರೇಯಸ್ಸು ಧೋನಿಗೆ ಅರ್ಹವಾಗಿಯೇ ಸಲ್ಲಬೇಕು. ಇನ್ನೊಂದೆಡೆ ತನ್ನ ವೈಯಕ್ತಿಕ ಆಟದ ಕಡೆಗೂ ಗಮನಹರಿಸಲೇಬೇಕು. ಇಲ್ಲದೆ ಇದ್ರೆ ನಾಯಕತ್ವಕ್ಕೆ ಕೊಕ್ ನೀಡುವ ಆತಂಕವೂ ಇದೆ. ಆದ್ರೆ ಕೂಲ್ ಕ್ಯಾಪ್ಟನ್ ಧೋನಿ ಎಲ್ಲವನ್ನು ಸಹನೆ, ತಾಳ್ಮೆಯಿಂದಲೇ ತಂಡವನ್ನು ಮುನ್ನಡೆಸಿಕೊಂಡು ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾಗೆ ತನ್ನದೇ ಅದ ಸ್ಥಾನಮಾನವನ್ನು ಒದಗಿಸಿದ್ರು. ಜೊತೆಗೆ ಸ್ಥಾನಮಾನವನ್ನು ಹೆಚ್ಚಿಸಿದ್ರು.
ವಿಶ್ವ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹೆಜ್ಜೆ ಗುರುತುಗಳು…!
ಮಹೇಂದ್ರ ಸಿಂಗ್ ಧೋನಿ ಒಟ್ಟು ಆಡಿರುವ ಅಂತಾರಾಷ್ಟ್ರೀಯ ಪಂದ್ಯಗಳು – 538
ಎಮ್.ಎಸ್ ಧೋನಿ ದಾಖಲಿಸಿದ್ದ ಒಟ್ಟು ಅಂತಾರಾಷ್ಟ್ರೀಯ ರನ್ ಗಳು – 17,226
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಧೋನಿಯ ಬ್ಯಾಟ್‍ನಿಂದ ಸಿಡಿದ ಶತಕಗಳು – 16
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ದಾಖಲಿಸಿದ್ದ ಅರ್ಧಶತಕಗಳ ಸಂಖ್ಯೆ -108
ಟೆಸ್ಟ್ ಕ್ರಿಕೆಟ್ ನಲ್ಲಿ ಸಿಡಿಸಿದ್ದ ವೈಯಕ್ತಿಕ ಗರಿಷ್ಠ ಸ್ಕೋರು -224
ಏಕದಿನ ಕ್ರಿಕೆಟ್ ನಲ್ಲಿ ದಾಖಲಿಸಿದ್ದ ವೈಯಕ್ತಿಕ ಗರಿಷ್ಠ
ಸ್ಕೋರು – 182
ಹೊಡಿ ಬಡಿ ಆಟದ ಖ್ಯಾತಿಯ ಧೋನಿ ಸಿಡಿಸಿದ್ದ ಸಿಕ್ಸರ್ ಗಳ ಸಂಖ್ಯೆ – 359
ವಿಕೆಟ್ ಹಿಂದುಗಡೆ ನಿಂತುಕೊಂಡು ಹಿಡಿದ ಕ್ಯಾಚ್ ಗಳ ಸಂಖ್ಯೆ – 634
ಚಾಣಕ್ಯ ವಿಕೆಟ್ ಕೀಪರ್ ಮಾಡಿರುವ ಸ್ಟಂಪ್‍ಗಳ ಸಂಖ್ಯೆ 195
ಹೀಗೆ ಎಮ್.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಆಟಗಾರನಾಗಿ ಹಾಗೂ ನಾಯಕನಾಗಿ ಧೋನಿ ಮಾಡಿರುವ ಸಾಧನೆ ಮುಂದಿನ ಆಟಗಾರರಿಗೆ ದಾರಿದೀಪವಾಗಿದೆ. ಮ್ಯಾಚ್ ವಿನ್ನರ್ ಖ್ಯಾತಿಯ ಧೋನಿ ತಾಳ್ಮೆಯಿಂದಲೇ ಸ್ಪೋಟಕ ಆಟವನ್ನಾಡುವ ಕಲೆಯನ್ನು ಕರಗತಮಾಡಿಕೊಂಡಿದ್ದರು.








