ಶೂನ್ಯದಿಂದ ಆರಂಭ.. ಜೊತೆ ಜೊತೆಯಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ ಧೋನಿ -ರೈನಾ
ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ.. ಟೀಮ್ ಇಂಡಿಯಾದ ಒಡನಾಡಿಗಳು.. ಆಪ್ತಮಿತ್ರರು.. 2004ರಲ್ಲಿ ಬಾಂಗ್ಲಾ ದೇಶ ವಿರುದ್ಧ ಧೋನಿ ಟೀಮ್ ಇಂಡಿಯಾಗೆ ಎಂಟ್ರಿಯಾದ್ರೆ, ಸುರೇಶ್ ರೈನಾ 2005 ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಆದ್ರೆ ಇಬ್ಬರು ಕೂಡ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ರು.
ಎಲ್ಲವೂ ಆರಂಭವಾಗುವುದು ಸೊನ್ನೆಯಿಂದಲೇ. ಹಾಗೇ ಧೋನಿ ಮತ್ತು ಸುರೇಶ್ ರೈನಾ ಸೊನ್ನೆಯಿಂದಲೇ ತಮ್ಮ ಏಕದಿನ ಕ್ರಿಕೆಟ್ ರನ್ ಖಾತೆಯನ್ನು ಶುರು ಮಾಡಿದ್ದರು. ಆದ್ರೆ ನೋಡ ನೋಡುತ್ತಲೇ ಇಬ್ಬರು ಆಟಗಾರರು ಕೂಡ ವಿಶ್ವ ಕ್ರಿಕೆಟ್ ನಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಧೋನಿ ನಾಯಕನಾಗಿ ಯಶಸ್ಸಿನ ಮೇಲೆ ಯಶಸ್ಸು ಸಾಧಿಸಿದ್ದರು. ಅದೇ ರೀತಿ ಸುರೇಶ್ ರೈನಾ ಕೂಡ. ಆಲ್‍ರೌಂಡರ್ ಆಗಿ ಟೀಮ್ ಇಂಡಿಯಾದಲ್ಲಿ ಮಿಂಚು ಹರಿಸಿದ್ದರು. ಅದ್ಭುತ ಫೀಲ್ಡಿಂಗ್ ಮೂಲಕವೂ ಗಮನ ಸೆಳೆದಿರುವಂತಹ ಸುರೇಶ್ ರೈನಾ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲೂ ಮಿಂಚು ಹರಿಸಿದ್ದರು. ಆದ್ರೆ ಸುರೇಶ್ ರೈನಾಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ.
ಇನ್ನು ಧೋನಿ ಮತ್ತು ಸುರೇಶ್ ರೈನಾ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರನೂ ಆಡುತ್ತಿದ್ದಾರೆ. ಇವರಿಬ್ಬರ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್ ಗೆ ಧೋನಿ ವಿದಾಯ ಹೇಳಿದಾಗ ಸುರೇಶ್ ರೈನಾ ಕಣ್ಣೀರು ಹಾಕಿದ್ದರು. ಇದೀಗ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದಾಗ ತಾನು ಕೂಡ ಧೋನಿಯ ಹಾದಿಯನ್ನೇ ಹಿಡಿದಿದ್ದಾರೆ.
ಹೀಗೆ ಶೂನ್ಯದಿಂದ ಶುರುವಾದ ಕ್ರಿಕೆಟಿಗರು ತನ್ನ ಏಕದಿನ ಕ್ರಿಕೆಟ್ ಬದುಕಿನಲ್ಲಿ ಯಶ ಸಾಧಿಸಿದ್ದಾರೆ. ಇಂತಹ ಟಾಪ್ -5 ಲಿಸ್ಟ್ ನಲ್ಲಿ ಧೋನಿ ಅಗ್ರ ಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ 350
ಏಕದಿನ ಪಂದ್ಯಗಳನ್ನು ಆಡಿದ್ದು 10,772 ರನ್ ಗಳಿಸಿದ್ದಾರೆ. ಇದ್ರಲ್ಲಿ ಹತ್ತು ಶತಕ ಹಾಗೂ 73 ಅರ್ಧಶತಕಗಳಿವೆ. ಹಾಗೇ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ 287 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 7534 ರನ್ ಹಾಗೂ 9 ಶತಕಗಳನ್ನು ದಾಖಲಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದಾರೆ. ಸುರೇಶ್ ರೈನಾ 225 ಏಕದಿನ ಪಂದ್ಯಗಳಲ್ಲಿ 5615 ರನ್ ಹಾಗೂ ಐದು ಶತಕ ಹಾಗೂ 36 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್‍ನ ಜೇಸನ್ ರಾಯ್. ಇವರು 87 ಏಕದಿನ ಪಂದ್ಯಗಳಲ್ಲಿ 3434 ರನ್ ಹಾಗೂ 9 ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾಮರೂನ್ ವೈಟ್ 91 ಏಕದಿನ ಪಂದ್ಯಗಳಲ್ಲಿ 2071 ರನ್ ಹಾಗೂ ಎರಡು ಶತಕ ದಾಖಲಿಸಿದ್ದಾರೆ.








