ಬೆಳಗಾವಿ : ಬೆಳಗಾವಿಯ ಕಿತ್ತೂರಿನಲ್ಲಿ ವೃದ್ಧನ ಶವವನ್ನು ಸೈಕಲ್ ನಲ್ಲಿ ಸಾಗಿಸಿದ ಬಗ್ಗೆ ರಾಜ್ಯಾದ್ಯಂತ ಚರ್ಚೆಗಳು ಆರಂಭವಾಗಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ಬೆಳಗಾವಿಯ ಕಿತ್ತೂರಿನ 70 ವರ್ಷದ ವೃದ್ಧನ ಶವವನ್ನು ಕುಟುಂಬ ಸದಸ್ಯರು ಮಳೆಯಲ್ಲಿ ನೆನೆಯುತ್ತಾ ಸೈಕಲ್ ನಲ್ಲಿ ಸಾಗಿಸಿದ್ದಾರೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ ಎಲ್ಲಿದೆ ನಿಮ್ಮ ಸರ್ಕಾರ? ಅವರಿಗೆ ಏಕೆ ಆಂಬ್ಯುಲೆನ್ಸ್ ಒದಗಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ “ಈ ಅಸಮರ್ಥ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದ್ದು, ಪಿಡುಗು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಸರ್ಕಾರದ ವಿರುದ್ಧ ದೂರಿದ್ದಾರೆ.
https://twitter.com/DKShivakumar/status/1295238575395504129?s=20
ಬೆಳಗಾವಿಯ ಕಿತ್ತೂರು ತಾಲೂಕಿನ ಎಂ. ಕೆ. ಹುಬ್ಬಳ್ಳಿಯ ವೃದ್ಧ ಜ್ವರದಿಂದಾಗಿ ಮೃತಪಟ್ಟಿದ್ದರು. ಕೋವಿಡ್ನಿಂದ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಂತ್ಯಕ್ರಿಯೆಗೆ ಸಹಕಾರ ನೀಡಲಿಲ್ಲ. ಆಂಬ್ಯುಲೆನ್ಸ್ ಸಹ ಸಿಗದ ಕಾರಣ ಕುಟುಂಬದವರು ಸೈಕಲ್ನಲ್ಲಿ ಶವವನ್ನು ಸಾಗಣೆ ಮಾಡಿದ್ದರು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.








