ಹಾಸನ : ಮಾಜಿ ಸಚಿವ ಹೆಚ್.ಡಿ ರೇವಣ್ಣ ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ದಿಢೀರ್ ಭೇಟಿ, ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು. ಭೇಟಿ ವೇಳೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ರೇವಣ್ಣ, ಇನ್ಮುಂದೆ ಕಚೇರಿಯಲ್ಲಿ ಏಜೆಂಟರು ಕಾಣಿಸಿಕೊಂಡರೆ ಜನರಿಗೆ ಹೇಳಿ ಓಡಾಡಿಸಿಕೊಂಡು ಹೊಡೆಸುತ್ತೇನೆ. ನನ್ನ ಮೇಲೆ ಯಾರು ಎಫ್ ಐಆರ್ ಹಾಕಿಸುತ್ತಾರೋ ಹಾಕಲಿ, ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಂದೊಂದು ನಿವೇಶನಕ್ಕೂ ಬಡ ಜನರಿಂದ ಹಣ ಪಡೆಯುವ ನೀವು ಈ ಹಣವನ್ನು ಶಾಸಕರಿಗೆ ಕೊಡೊದಕ್ಕಾ? ನನ್ನ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿ ಬರುತ್ತವೆ. ಅವರಿಗೆ ಯಾಕೆ ನೀವು ಕೆಲಸ ಮಾಡಿ ಕೊಡುತ್ತಿಲ್ಲ. ಯಾವ ಶಾಸಕರಿಗೆ ಹಣ ಕೊಡುತ್ತಿದ್ದೀರಾ? ಪ್ರತಿ ತಿಂಗಳು ನಾಲ್ಕು ಲಕ್ಷ ಕೊಡಬೇಕು ಅಂತಾ ಜನರಿಂದ ಹಣ ವಸೂಲಿ ಮಾಡುತ್ತಿದ್ದೀರ. ಸರ್ಕಾರಕ್ಕೆ ಕೊಡಲು ವಸೂಲಿ ಮಾಡುತ್ತಿದ್ದೀರಾ ಅಥವಾ ಬೇರೆ ಯಾರಿಗೆ ಕೊಡಲು ವಸೂಲಿ ಮಾಡುತ್ತಿದ್ದೀರಾ ಹೇಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಏಜೆಂಟ್ ಇಟ್ಟುಕೊಂಡು ಕೆಲಸ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆಯೇ? ಯಾವನು ಇಲ್ಲಿ ಕೂತುಕೊಳ್ಳುವವನು? ಇಲ್ಲಿ ತಿಂಗಳ ಕಲೆಕ್ಷನ್? ಅಂತೆ ಅವನದ್ದು. ಬಡ ಬಗ್ಗರು ಏನಾಗಬೇಕು? ಈ ದಿನದ ಫೈಲ್ ಗಳನ್ನು ತೋರಿಸಿ, ನಿಮ್ಮ ಡ್ರಾವರ್ ಎಲ್ಲ ತೆಗೆಯಿರಿ, ಎಷ್ಟು ಹಣ ಇದೆ ನೋಡೋಣ ಎಂದು ಗುಡುಗಿದರು.
ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಚೇರಿಯ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದರು.








