ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಬಿಡುಗಡೆ ಮಾಡಲು ಅನುಮತಿ ನೀಡಬಾರದು ಎಂದು ವಿರೋಧಿಸಿ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಚಿತ್ರ ಬಿಡುಗಡೆಗೆ ಅನುಮತಿ ನೀಡದಂತೆ ಹುಬ್ಬಳ್ಳಿಯ ಸಮಾಜ ಸೇವಕರಾದ ಜಿ.ಶಿವಶಂಕರ್ ಎಂಬಾತರು ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ಎಂಟ್ರಿಯಾದ ಬಳಿಕ ಚಿತ್ರ ಬಿಡುಗಡೆಗೆ ಅಪವಾದ ಶುರುವಾಗಿತ್ತು. ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ವಿರುದ್ಧ ಕಿಡಿಕಾರಿದ್ದ ಶಿವಶಂಕರ್, ಸಂಜಯ್ ದತ್ ದೇಶದ್ರೋಹಿ. ಅವರು ಕರ್ನಾಟಕಕ್ಕೆ ಕಾಲಿಡಬಾರದು. ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಬಾರದು. ಅವರನ್ನು ಈ ಚಿತ್ರದಿಂದಲೇ ಕೈ ಬಿಡಬೇಕು ಎಂದು ಆಗ್ರಹಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸಂಜಯ್ ದತ್ 1993ರಲ್ಲಿ ನಡೆದ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಚಾರ್ಜ್‌ಷೀಟ್‌ನಲ್ಲಿ ಅವರ ಹೆಸರಿತ್ತು. ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಲ್ಲಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. 2016ರಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಶಿಕ್ಷೆಗೆ ಒಳಗಾದ ನಟ ಸಿನಿಮಾದಲ್ಲಿ ನಟಿಸುವುದನ್ನು ನಿಷೇಧಿಸುವ ಬಗ್ಗೆ ಜಿ.ಶಿವಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.








