ಕೊರೊನಾ-ನೆರೆ ಲೆಕ್ಕಕ್ಕೇ ಇಲ್ಲ | ಸ್ಥಾನಮಾನಕ್ಕಾಗಿ ಬಿಜೆಪಿ ನಾಯಕರಿಂದ ದೆಹಲಿ ದಂಡಯಾತ್ರೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಕೊರೊನಾದ ಜೊತೆ ಜೊತೆಗೆ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಈ ಎರಡು ಪಿಡುಗುಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಸಮಯದಲ್ಲಿ ಜನರ ಜೊತೆಗೆ ನಿಂತು ಕೆಲಸ ಮಾಡಬೇಕಿದ್ದ ಸಚಿವರು, ಮಂತ್ರಿಗಿರಿ ಆಕಾಂಕ್ಷಿಗಳು, ಸ್ಥಾನಮಾನಕ್ಕಾಗಿ ದೆಹಲಿ ದಂಡಯಾತ್ರೆ ಶುರು ಮಾಡಿದ್ದು, ಪಕ್ಷದ ಹೆಡ್ ಮಾಸ್ಟರ್ ಗಳ ಮನ ಗೆಲ್ಲಲು ಭಾರಿ ಕಸರತ್ತು ನಡೆಸುತ್ತಿದ್ದಾರೆ.
ನಾಲ್ಕನೇ ಬಾರಿಗೆ ಸಾಹುಕಾರ್ ದಂಡಯಾತ್ರೆ
ಹೌದು..! ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯೋಕೆ ಪ್ರಮುಖ ಕಾರಣವಾಗಿದ್ದ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ನಾಲ್ಕನೇ ಬಾರಿಗೆ ದೆಹಲಿ ದಂಡಯಾತ್ರೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿ ಸರ್ಕಾರ ರಚನೆ ವೇಳೆ ಬಿಜೆಪಿಯ ಬಿಗ್ ಬಾಸ್ ಗಳು ರಮೇಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟ ನೀಡೋದಾಗಿ ಭರವಸೆ ನೀಡಿದ್ದರಂತೆ. ಈ ಕಾರಣಕ್ಕಾಗಿಯೇ ರಮೇಶ್ ಜಾರಕಿಹೊಳಿ, ಸರ್ಕಾರ ರಚನೆ ವೇಳೆ ಕೊಟ್ಟ ಮಾತಿನಂತೆ “ನನ್ನ ಡಿಸಿಎಂ ಮಾಡಿ” ಎಂದು ಪಟ್ಟು ಹಿಡಿದಿದ್ದಾರಂತೆ. ಈ ಬಗ್ಗೆ ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಜಾರಕಿಹೋಳಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸ್ಥಾನ ನೀಡಿ ಎಂದ “ಸೈನಿಕ”
ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಅಧಿಕಾರ ಹಿಡಿಯಲು ತೆರೆಮರೆಯಲ್ಲಿ ಕೆಲಸ ಮಾಡಿ ಆಪರೇಷನ್ ಕಮಲ ಯಶಸ್ಸಿಗೆ ಕಾರಣವಾಗಿದ್ದ ಸಿ.ಪಿ ಯೋಗೇಶ್ವರ್ ಕೂಡ ಬಿಜೆಪಿಗೆ ಬಿಗ್ ಬಾಸ್ ಗಳ ಕದ ತಟ್ಟಿದ್ದು, ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರಂತೆ. ಇವರೂ ಕೂಡ ಜೆ.ಪಿ ನಡ್ಡಾ ಜೊತೆಗೆ ರಾಜ್ಯದ ಕೇಂದ್ರ ಸಚಿವರನ್ನು ನಾಯಕರನ್ನು ಭೇಟಿ ಮಾಡಿದ್ದು ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೋಳಿ, ಸಿ.ಪಿ ಯೋಗೇಶ್ವರ್ ಬೆನ್ನಲ್ಲೆ ಸಚಿವ ಸಿ.ಟಿ ರವಿ ಕೂಡ ದೆಹಲಿಗೆ ಭೇಟಿ ನೀಡಿದ್ದು, ಇಂದು ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ರಾಜ್ಯದ ಸಮಸ್ಯೆಗಳನ್ನು ಗಾಳಿಗೆ ತೂರಿ ತಮ್ಮ ಸ್ಥಾನಮಾನಕ್ಕಾಗಿ ದೆಹಲಿಗೆ ಹಾರಿರುವ ಇವರ ಆಸೆ, ಬೇಡಿಕೆಗಳನ್ನು ಆಲಿಸಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ.
ಮಹೇಶ್ ಎಂ ದಂಡು








