ಕುಲ್-ಚಾ ಗ್ಯಾಂಗ್ ನ ಸುದರ್ಶನ ಚಕ್ರ ಅಸ್ತ್ರಕ್ಕೆ ಧೋನಿಯದ್ದೇ ವರ…!
ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಅವರನ್ನು ಟೀಮ್ ಇಂಡಿಯಾ ಕುಲ್-ಚಾ ಗ್ಯಾಂಗ್ ಎಂದೇ ಕರೆಯಲಾಗುತ್ತದೆ. ಇಬ್ಬರು ಯುವ ಸ್ಪಿನ್ನರ್ ಗಳು ಧೋನಿ ಕೈಯಿಂದ ಹೆಚ್ಚಾಗಿ ಬೈಸಿಕೊಂಡಿದ್ದಾರೆ. ಹಾಗೇ ಇವರಿಬ್ಬರ ಯಶಸ್ಸಿಗೆ ಧೋನಿ ಪ್ರಮುಖ ಕಾರಣ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. ಬ್ಯಾಟ್ಸ್ ಮೆನ್ ಗಳಿಗೆ ಯಾವ ರೀತಿ ಬೌಲಿಂಗ್ ಮಾಡಬೇಕು ಎಂದು ಧೋನಿ ಸಲಹೆ ನೀಡುತ್ತಾರೆ. ಅನೇಕ ಬಾರಿ ಯಶಸ್ವಿ ಕೂಡ ಆಗಿದ್ದಾರೆ. ಕೆಲವೊಂದು ಬಾರಿ ಧೋನಿಯ ಮಾತಿನಂತೆ ಬೌಲಿಂಗ್ ಮಾಡದಿದ್ದಾಗ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದೂ ಇದೆ.
2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಉರುಳಿಸಲು ಧೋನಿ ಪ್ಲಾನ್ ಮಾಡಿಕೊಂಡಿದ್ದರು. ವಾರ್ನರ್ ವಿಕೆಟ್ ಪತನಗೊಳಿಸಲು ಬಳಸಿಕೊಂಡಿದ್ದು ಕುಲದೀಪ್ ಯಾದವ್ ಅವರನ್ನು. ಚೆಂಡನ್ನು ಸ್ವಲ್ಪ ಹಿಂದಕ್ಕೆ ಎಸೆಯುವಂತೆ ಕುಲದೀಪ್ ಗೆ ಧೋನಿ ಹೇಳಿದ್ದರು. ಧೋನಿಯ ಅಣತಿಯಂತೆ ಬೌಲಿಂಗ್ ಮಾಡಿದ್ದ ಕುಲದೀಪ್ ವಿಕೆಟ್ ಕೂಡ ಪಡೆದುಕೊಂಡ್ರು.
ಹಾಗೇ ಕುಲದೀಪ್ ಯಾದವ್ಗೆ ಧೋನಿ ತನ್ನ ಮಾತಿನಲ್ಲೇ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಪಂದ್ಯವೊಂದರಲ್ಲಿ ಧೋನಿ ಕುಲದೀಪ್ಗೆ ಸಲಹೆ ನೀಡುತ್ತಿದ್ದರು. ಆದ್ರೆ ಧೋನಿ ಹೇಳಿದಂತೆ ಕುಲದೀಪ್ ಬೌಲಿಂಗ್ ಮಾಡುತ್ತಿರಲಿಲ್ಲ. ಆಗ ಸಿಟ್ಟಿಗೊಂಡ ಧೋನಿ ಕುಲದೀಪ್ಗೆ ಹೇಳಿದ್ದು ಹೀಗೆ.. ನಾನೇನು ಹುಚ್ಚಾ ಅಂದುಕೊಂಡಿದ್ದೀಯಾ… 300ಕ್ಕೂ ಹೆಚ್ಚು ಪಂದ್ಯವನ್ನು ಆಡಿದ್ದೇನೆ ಎಂದು ಹೇಳಿದ್ದರು. ಈ ಮಾತಿನಿಂದ ಎಚ್ಚೆತ್ತುಕೊಂಡ ಯಾದವ್ ಧೋನಿ ಹೇಳಿದಂತೆ ಬೌಲಿಂಗ್ ಮಾಡಿ ಯಶ ಸಾಧಿಸಿದ್ದರು.
ಇನ್ನು ಯುಜುವೇಂದ್ರ ಚಾಹಲ್ಗೂ ಧೋನಿ ಪ್ರೇರಣಾ ಶಕ್ತಿಯಾಗಿದ್ದರು. 2017ರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯ. ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್ ವಿಕೆಟ್ ಉರುಳಿಸಲು ಧೋನಿ ಪ್ಲಾನ್ ಮಾಡಿಕೊಂಡಿದ್ದರು. ಅದಕ್ಕೆ ಚಾಹಲ್ಗೆ ಸಲಹೆ ನೀಡುತ್ತಾ ಇದ್ರು. ಆದ್ರೆ ಚಾಹಲ್ ಧೋನಿ ಹೇಳಿದಂತೆ ಬೌಲಿಂಗ್ ಮಾಡಲಿಲ್ಲ. ಸ್ಟಂಪ್ ಮೇಲೆ ಬೌಲಿಂಗ್
ಮಾಡು ಅಂತ ಹೇಳ್ತಾನೆ ಇದ್ರು. ಚಾಹಲ್ ಆ ರೀತಿ ಬೌಲಿಂಗ್ ಮಾಡುತ್ತಿರಲಿಲ್ಲ. ಆಗ ನೀನು ನನ್ನ ಮಾತನ್ನು ಕೇಳುತ್ತಿಲ್ಲ ಅನ್ನೋ ಕೂಗು ಕೇಳಿಬರುತ್ತಿದ್ದಂತೆ ಚಾಹಲ್ ಜಾಗ್ರತರಾದ್ರು. ಧೋನಿ ಹೇಳಿದಂತೆ ಬೌಲಿಂಗ್ ಮಾಡಿದಾಗ ಅದೇ ರೀತಿ ಮಾಡು ಅಂತ ಹೇಳುತ್ತಿದ್ದರು. ಕೊನೆಗೆ ಚಾಹಲ್ ಮ್ಯಾಕ್ಸ್ ವೆಲ್ ಅವರ ವಿಕೆಟ್ ಪಡೆಯುವಲ್ಲಿ ಚಾಹಲ್ ಯಶಸ್ವಿಯಾದ್ರು.
ಹೀಗೆ ಅನೇಕ ಪಂದ್ಯಗಳಲ್ಲಿ ಕುಲದೀಪ್ ಯಾದವ್ ಮತ್ತು ಚಾಹಲ್ ಅವರು ಧೋನಿಯ ಮಾರ್ಗದರ್ಶನಂತೆ ಬೌಲಿಂಗ್ ಮಾಡಿ ಯಶ ಸಾಧಿಸಿದ್ದಾರೆ. ಅಲ್ಲದೆ ಧೋನಿಯ ಸಲಹೆ ಮತ್ತು ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಹಾಗೇ ಧೋನಿ ಮೈದಾನದಲ್ಲಿ ಬೈದಿರುವ ವಿಚಾರಗಳನ್ನು ಯಾವುದೇ ಸಂಕೋಚವಿಲ್ಲದೆ ಹೇಳಿದ್ದಾರೆ.








