ಮುಂಬೈ : ಭಾರತದ ಅತಿರಥ -ಮಹಾರಥ ಕಂಪೆನಿಗಳ ನಡುವೆ ಸಾಕಷ್ಟು ಪೈಪೋಟಿಗೆ ಕಾರಣವಾಗಿದ್ದ 2020ರ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಡ್ರೀಮ್ ಇಲೆವೆನ್ ಪಾಲಾಗಿದೆ. ಫ್ಯಾಂಟಸಿ ಕ್ರಿಕೆಟ್ ಲೀಗ್ ಸಂಸ್ಥೆ ಡ್ರೀಮ್ ಇಲೆವೆನ್ ಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವ ಲಭಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಬಾರಿಯ ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಪ್ರತಿಷ್ಠಿತ ಟಾಟಾ ಗ್ರೂಪ್, ಕೋಕಾ ಕೋಲಾ ಕಂಪೆನಿ, ಬೈಜೂಸ್ ಮತ್ತು ಅನ್ ಅಕಾಡಮೆ ಸಂಸ್ಥೆಗಳು ಬಿಸಿಸಿಐನ ಬಿಡ್ಡಿಂಗ್ ರೇಸ್ ಗೆ ಲಗ್ಗೆ ಇಟ್ಟಿದ್ವು. ಆದ್ರೆ ಅಂತಿಮ ಹಂತದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ, ಟಾಟಾ ಗ್ರೂಪ್ 180 ಕೋಟಿ ರೂ. ಮೊತ್ತ ಬಿಡ್ ನಡೆಸಿದರೆ, ಬೆಂಗಳೂರು ಮೂಲದ ಆನ್ಲೈನ್ ಶಿಕ್ಷಣ ಆಯಪ್ ಅನ್ಅಕಾಡೆಮಿ 210 ಕೋಟಿ ರೂ. ಮೊತ್ತದ ಬಿಡ್ ನಡೆಸಿ ಡ್ರೀಮ್11ಗಿಂತ ಹಿಂದೆ ಉಳಿಯಿತು. ಅಂತಿಮವಾಗಿ ಶಿಕ್ಷಣ ತಂತ್ರಜ್ಞಾನ ಕಂಪೆನಿಯಾಗಿರುವ ಅನಾಕಾಡೆಮಿ ಮತ್ತು ಫ್ಯಾಂಟಸಿ ಸ್ಪೋಟ್ರ‍್ಸ್ ಫ್ಲಾಟ್ ಫಾರ್ಮ್ ಡ್ರೀಮ್ ಇಲೆವೆನ್ 222 ಕೋಟಿ ರೂ. ಗೆ ಬಿಡ್ ಗೆದ್ದುಕೊಂಡಿದೆ.
ಡ್ರೀಮ್11ಗೆ ಐಪಿಎಲ್ ಶೀರ್ಷಿಕೆ ಪ್ರಾಯೋಕತ್ವ ನೀಡಿರುವುದನ್ನು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಂಗಳವಾರ ಖಚಿತಪಡಿಸಿದ್ದಾರೆ. 4 ತಿಂಗಳು ಮತ್ತು 13 ದಿನಗಳ ಈ ಶೀರ್ಷಿಕೆ ಪ್ರಾಯೋಜಕತ್ವ 2020ರ ಡಿಸೆಂಬರ್ 31ರವರೆಗೆ ಇರಲಿದೆ.
ಈ ಹಿಂದೆ ಚೀನಾ ಮೂಲದ ವಿವೋ ಕಂಪೆನಿಯೂ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಆದ್ರೆ ಚೀನಾ ಭಾರತದ ಸೈನಿಕರ ಮೇಲೆ ಏಕಾಏಕಿ ದಾಳಿ ನಡೆಸಿದ್ದರಿಂದ ಚೀನಾ ವಸ್ತುಗಳ ಮೇಲೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಅಲ್ಲದೆ ಚೀನಾ ಬ್ಯಾನ್ ಅಭಿಯಾನವೂ ಶುರುವಾಗಿತ್ತು. ಇನ್ನೊಂದೆಡೆ ವಿವೋ ಕಂಪೆನಿಯ ಜೊತೆ ಒಪ್ಪಂದ ಮುಂದುವರಿಸಿದ್ರೆ ಭಾರತದಲ್ಲಿ ಐಪಿಎಲ್ ಗೂ ಬ್ಯಾನ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯೂ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ವಿವೋ ಕಂಪೆನಿಯೇ ಈ ಬಾರಿಯ ಐಪಿಎಲ್ ಟೈಟಲ್ ಒಪ್ಪಂದದಿಂದ ಹಿಂದೆ ಸರಿಯಿತ್ತು.
ಬಿಸಿಸಿಐ ಮತ್ತು ವಿವೋ ಕಂಪೆನಿಯ ಜೊತೆಗಿನ ಐದು ವರ್ಷಗಳ ಒಪ್ಪಂದದಲ್ಲಿ ಪ್ರತಿ ವರ್ಷ 440 ಕೋಟಿ ರೂಪಾಯಿ ಪಾವತಿಸಬೇಕಿತ್ತು.








