ಬೆಂಗಳೂರು: ಸ್ಯಾಂಡಲ್ವುಡ್ನ ಹಿಟ್ ಚಿತ್ರ ‘ಬೆಲ್ ಬಾಟಮ್’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಪ್ರತಿಭಾವಂತ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ, ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಉತ್ತರ ಕರ್ನಾಟಕದ ಸೊಗಡು ಮತ್ತು ಸಂಸ್ಕೃತಿಯನ್ನು ಒಳಗೊಂಡ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹುಬ್ಬಳ್ಳಿಯಲ್ಲೇ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಲಾಗಿತ್ತು. ಕಥೆಯ ನೈಜತೆಗೆ ಧಕ್ಕೆ ಬಾರದಂತೆ ಮೊದಲ ಹಂತದಲ್ಲಿ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ ಮತ್ತು ನಂತರ ಶಿರಸಿ ಹಾಗೂ ಧಾರವಾಡದ ಸುಂದರ, ನೈಜ ತಾಣಗಳಲ್ಲೇ ಚಿತ್ರೀಕರಣ ನಡೆಸಿರುವುದು ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.
ಖ್ಯಾತ ನಟರಾದ ಶ್ರೀ ಪ್ರಮೋದ್ ಶೆಟ್ಟಿ,ಚೇತನ್ ಮಾರಂಬೀಡ್, ಪವನ್ ಕುಲಕರ್ಣಿ, ಸುಮಿತ್ ಸಂಕೋಜಿ, ನಮನ್ ಅರೋರ, ಧನ್ಯಶ್ರೀ ಸುಜಿತ್, ವನು ಪಾಟೀಲ್ ದೀಪಕ್ ರಾವ್, ಶಿವು ಗುಂಡಣ್ಣನವರ್, ವಿನಯ್ ದೊಡ್ಡಮನಿ,ಪವನ್ ಅಣ್ಣೆಗೇರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಹಿರಿಯ ಕಲಾವಿದರಾದ ಶ್ರೀ ರಮೇಶ್ ಭಟ್ ಚಿತ್ರದ ತಾರಾಗಣದಲ್ಲಿದ್ದು, ತಮ್ಮ ಅನುಭವಿ ಅಭಿನಯದ ಮೂಲಕ ಸಿನಿಮಾದ ತೂಕ ಹೆಚ್ಚಿಸಲಿದ್ದಾರೆ. ಈ ಚಿತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಕಂಟೆಂಟ್ ಕ್ರಿಯೇಟರ್ಸ್ ದೊಡ್ಡ ಪರದೆಯ ಮೇಲೆ ಬಣ್ಣ ಹಚ್ಚುತ್ತಿರುವುದು ವಿಶೇಷ.
ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಅವರೊಂದಿಗೆ ಜಂಟಿಯಾಗಿ ಸಂಭಾಷಣೆ ಹೆಣೆದಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದ್ದು, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಹಾಗೂ ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನ, ಹಿನ್ನೆಲೆ ಸಂಗೀತ ನಿರ್ದೇಶನ ಸುಜಿತ್ ಶ್ರೀಧರ್, ಕಲಾ ನಿರ್ದೇಶನ ಧರಣಿ ಗಂಗೆಪುತ್ರ, ಸಂಕಲನ ಸುರೇಶ್ ಮಲ್ಲಯ್ಯ, ಆಕಾಶ್ ಹಿರೇಮಠ ಚಿತ್ರಕ್ಕಿದೆ. ಸದ್ಯ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಚಿತ್ರತಂಡ, ಶೀಘ್ರದಲ್ಲೇ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.








