ಬೆಳಗಾವಿ : ಕೃಷ್ಣ ನದಿ ಜಲಾನಯ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಕೃಷ್ಣ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿ ನದಿ ಪಾತ್ರದಲ್ಲಿರುವ ಗ್ರಾಮಗಳು ನಡುಗಡ್ಡೆಗಳಾಗಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಏತನ್ಮಧ್ಯೆ ಬೆಳಗಾವಿ ಜಿಲ್ಲೆಯಾದ್ಯಂತ ಈವರೆಗೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನದಿಗಳ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಯ ಒಳಹರಿವು ಎರಡೂವರೆ ಕ್ಯೂಸೆಕ್ಸ್ ಬಂದರೆ ಮಾತ್ರ ನದಿಪಾತ್ರದಲ್ಲಿ ಪ್ರವಾಹ ಬರುತ್ತದೆ. ಹೆಚ್ಚಿನ ಮಳೆಯಿಂದ ಪ್ರವಾಹ ಬರಬಹುದು ಎಂಬ ಕಾರಣಕ್ಕೆ ಕ್ರಮ ವಹಿಸುವಂತೆ ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದೇವೆ. ಜನ ಜಾಗೃತರಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಮಳೆಯಿಂದ ಹಾನಿಯಾದ ಬೆಳೆಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಹಾನಿಗೆ ಪರಿಹಾರ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರು ಗಲಭೆ ಪ್ರಕರಣದ ಕುರಿತು ಮಾತನಾಡಿದ ಸವದಿ, “ಇದಕ್ಕೆ ಕಾಂಗ್ರೆಸ್ ಕಾರಣ. ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಗಲಭೆಯಲ್ಲಿ ಪಾಲ್ಗೊಂಡ ಸಂಘಟನೆ ನಿಷೇಧಕ್ಕೆ ಸಂಪುಟದಲ್ಲಿ ನಿರ್ಣಯಿಸಲಾಗುವುದು” ಎಂದರು.








