ಚಾಮರಾಜನಗರ: ಚಾಮರಾಜನಗರದ ಮಾಜಿ ಶಾಸಕರಾದ 68 ವರ್ಷದ ಧುರೀಣ ಪಿ. ಗುರುಸ್ವಾಮಿ ಅವರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಧುರೀಣ ಅವರು ಚಾಮರಾಜನಗರದ ಮೊದಲ ಬಿಜೆಪಿ ಶಾಸಕರೂ ಕೂಡ ಹೌದು. ಆಗಸ್ಟ್ 5 ರಂದು ಸೋಂಕು ದೃಢಪಟ್ಟ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಗುರುಸ್ವಾಮಿಯವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಯಾನಗಹಳ್ಳಿಯ ತೋಟದಲ್ಲಿ ಕೋವಿಡ್ ಶಿಷ್ಟಾಚಾರ ದಂತೆ ನಡೆಯಲಿದೆ.
ಗುರುಸ್ವಾಮಿ ಅವರು 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯ ಸಾಧಿಸಿದ್ದರು. ಈ ಮೂಲಕ ಚಾಮರಾಜನಗರದ ಮೊದಲ ಬಿಜೆಪಿ ಶಾಸಕರಾಗಿ ಹೊರಹೊಮ್ಮಿದರು. ಇನ್ನೂ 2004ರ ಅವಧಿಯಲ್ಲೂ ಮತ್ತೊಮ್ಮೆ ಶಾಸಕರಾಗಿದ್ದರು. ಇದಾದ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದ ಧುರೀಣ ಅವರು ಮತ್ತೊಮ್ಮೆ ಬಿಜೆಪಿಗೆ ಹಾರಿದ್ದರು.








