ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಸೋಂಕು ಹೆಚ್ಚುತ್ತಲೇ ಇದೆ. ಸರ್ಕಾರದ ಅಸಮರ್ಪಕತೆ ಮುಂದುವರಿದಿದೆ. ಜನ ಇನ್ನೂ ಹೆಚ್ಚಾಗಿ ಸಮಸ್ಯೆಗೆ ತುತ್ತಾಗುತ್ತಲೇ ಇದ್ದಾರೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಕೆ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತಾಗಿ ಮಾತನಾಡಿರುವ ಅವರು ಬಿಇಐಸಿಯಲ್ಲಿ ಕೋವಿಡ್ ಸೆಂಟರ್ ಮಾಡಿದ್ದಾರೆ ಅಲ್ಲಿ ಕುಡಿಯುವ ನೀರಿಲ್ಲ. 15 ರೂಂಗೆ ಒಂದು ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಕಾರಣ. ಇದರ ಕುರಿತಾಗಿ ಮಾನವಹಕ್ಕುಗಳ ಆಯೋಗಕ್ಕೆ ವಿವರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಹೆಚ್ ಕೆ ಪಾಟೀಲ್ ಅವರು ಬೆಡ್, ಸಿಬ್ಬಂದಿ, ಔಷಧಿಗಳ ಕೊರತೆ ಮುಂದುವರಿದಿದೆ. ಆಕ್ಸಿಜನ್ ಕೊರತೆಯು ಹೆಚ್ಚಾಗಿ ಕಂಡು ಬರುತ್ತಿದೆ. 25 ಸಾವಿರ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ. ಇದರಲ್ಲಿ ಒಂದು ಸಾವಿರ ಮಂದಿಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆ ಮುಂದುವರಿದಿದೆ. ಸರ್ಕಾರದ ಒಂದು ಟಾಸ್ಕ್ ಪೋರ್ಸ್ ಮಾಡಬೇಕು. ಆಕ್ಸಿಜನ್, ಬೆಡ್ ಪೂರೈಕೆ ಇತರ ಸಮಸ್ಯೆ ಬಗ್ಗೆ ಗಮನಹರಿಸಬೇಕು. ಗುಜರಾತ್ ಕಂಪನಿಗೆ ಆಕ್ಸಿಜನ್ ಟೆಂಡರ್ ಕೊಟ್ಟು ವಾಪಸ್ ಪಡೆದರು. ಲಿಕ್ವಿಡ್ ಆಕ್ಸಿಜನ್ ಫೈಪ್ ಲೈನ್ ಹಾಕಿಲ್ಲ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದರೆ ಸರ್ಕಾರವೇ ಹೊಣೆ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು , ಉಳುವವನಿಂದ ಭೂಮಿ ಕಿತ್ತು ಉಳ್ಳವನಿಗೆ ನೀಡಿದೆ. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ನಮ್ಮ ಪಕ್ಷ ಇದನ್ನ ವಿರೋಧಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.









