ಸುದ್ದಿ ಮನೆಯಲ್ಲಿ ಹಬ್ಬದ ಸಂಭ್ರಮ ಹುಟ್ಟುಹಾಕಿದ ಹರಿಕಾರ ಮಹೇಂದ್ರ ಸಿಂಗ್ ಧೋನಿ ( ಭಾಗ-1)
ಅದು 2007. ಫೆಬ್ರವರಿ 20… ಸತತ ಮೂರನೇ ಪ್ರಯತ್ನದಲ್ಲಿ ನಾನು ಟಿವಿ 9 ಕುಟುಂಬದೊಳಗೆ ಸೇರಿಕೊಂಡ ದಿನ. ಕ್ರೀಡಾ ವಿಭಾಗದ ಮುಖ್ಯಸ್ಥ ಮತ್ತು ಬೌಂಡರಿ ಲೈನ್ ಕಾರ್ಯಕ್ರಮದ ರೂವಾರಿ ಸುನೀಲ್ ಶಿರಸಂಗಿಯವರ ಪ್ರೀತಿಯ ಹಠದಿಂದಾಗಿ ನಾನು ಕೂಡ ಬೌಂಡರಿ ಲೈನ್ ಕಾರ್ಯಕ್ರಮದ ಭಾಗವಾಗಿದ್ದೆ. ಇನ್ನೇನೂ ಕೆರೆಬಿಯನ್ ವಿಶ್ವಕಪ್ ಶುರುವಾಗುವ ಮುನ್ನವೇ ಬೌಂಡರಿ ಲೈನ್ ವಿಶೇಷ ಕಾರ್ಯಕ್ರಮದ ಪ್ಲಾನ್ ಗಳು ರೆಡಿಯಾಗಿದ್ದವು. ಆದ್ರೆ ರಾಹುಲ್ ದ್ರಾವಿಡ್ ಸಾರಥ್ಯದ ಟೀಮ್ ಇಂಡಿಯಾ ಕೆರೆಬಿಯನ್ ವಿಶ್ವಕಪ್ ನ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಹೀಗಾಗಿ ಟೂರ್ನಿಯ ಉತ್ಸಾಹ ಕಡಿಮೆಯಾಗಿದ್ದರೂ ವಿಭಿನ್ನ ಕ್ರೀಡಾ ಕಾರ್ಯಕ್ರಮಗಳಿಗೆ ಕೊರತೆ ಏನು ಆಗಲಿಲ್ಲ..
ಅಷ್ಟೊತ್ತಿಗೆ ಟೀಮ್ ಇಂಡಿಯಾದಲ್ಲಿ ಮಹತ್ತರವಾದ ಬದಲಾವಣೆಗಳಾದವು. ಹಾಗೇ ಬೌಂಡರಿ ಲೈನ್ ಕ್ರೀಡಾ ವಿಭಾಗದಲ್ಲಿ ಕೆಲವೊಂದು ಬದಲಾವಣೆಗಳು ಆದವು.
ಸುದರ್ಶನ್, ರಮಕಾಂತ್ ಸ್ಥಾನ ಪಲ್ಲಟವಾಗಿದ್ದರು. ಬಡೆಕಿಲ ಪ್ರದೀಪ್ ಕೂಡ ಬೇರೆ ವಿಭಾಗಕ್ಕೆ ಹೋಗಿದ್ದರು. ಉಳಿದಿರುವುದು ನಾನು ಮತ್ತು ಜೀವನ್ ಅರಂತೋಡು ಹಾಗೂ ಸುನೀಲ್ ಶಿರಸಂಗಿ. ಆಗ ಎಂಟ್ರಿಯಾಗಿದ್ದು ಪ್ರಮೋದ್ ಶಾಸ್ತ್ರಿ ಮತ್ತು ಗಂಗಾಧರ್.
2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್..
ಕೆರೆಬಿಯನ್ ವಿಶ್ವಕಪ್ ಮುಗಿದ ತಕ್ಷಣವೇ 2007ರ ಟಿ-ಟ್ವೆಂಟಿ ವಿಶ್ವಕಪ್ ಗೆ ಕ್ಷಣಗಣನೆ ಶುರುವಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬರುತ್ತಿದ್ದವರು ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಸುನೀಲ್ ಜೋಶಿ, ವಿಜಯ್ ಭಾರದ್ವಾಜ್, ಸುಜೀತ್ ಸೋಮ್ ಸುಂದರ್, ದೊಡ್ಡ ಗಣೇಶ್ ಮತ್ತು ಸೋಮಶೇಖರ್ ಶಿರಗುಪ್ಪಿ ಹಾಗೂ ಚಂದ್ರಮೌಳಿ ಕಣವಿ ಸರ್. ಇವರು ಪ್ರತಿ ದಿನ 8 ಗಂಟೆಗೆ ಕಚೇರಿಗೆ ಆಗಮಿಸುತ್ತಿದ್ದರು. ಅರ್ಧಗಂಟೆ ಕಾರ್ಯಕ್ರಮದ ನಂತರ ಸುಮಾರು ಒಂದು ಗಂಟೆಗಳ ಕಾಲ ಕ್ರಿಕೆಟ್ ನ ಹಲವು ಸ್ವಾರಸ್ಯಕರವಾದ ಸುದ್ದಿಗಳನ್ನು ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಕ್ರಿಕೆಟ್ ಮತ್ತು ಕ್ರಿಕೆಟ್ ನಲ್ಲಿ ನಡೆಯುತ್ತಿದ್ದ ಕೆಲವೊಂದು ಅಚ್ಚರಿಯ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು.
ಹೀಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಶುರುವಾಗಿತ್ತು. ಸುನೀಲ್ ಶಿರಸಂಗಿ ಟೂರ್ನಿಯ ವರದಿ ಮಾಡಲು ದಕ್ಷಿಣ ಆಫ್ರಿಕಾಗೆ ತೆರಳಿದ್ದರು. ಹೀಗಾಗಿ ಬೌಂಡರಿ ಲೈನ್ ಕಾರ್ಯಕ್ರಮದ ಪೂರ್ತಿ ಜವಾಬ್ದಾರಿ ನನ್ನ ಮೇಲಿತ್ತು. ಇದಕ್ಕೆ ತಕ್ಕಂತೆ ಟಿ-ಟ್ವೆಂಟಿ ವಿಶ್ವಕಪ್ ವಿಶೇಷ ಕಾರ್ಯಕ್ರಮದ ಪ್ರೋಮೋ ಕೂಡ ರೆಡಿಯಾಗಿತ್ತು. ಆಗ ಶಾರೂಕ್ ಖಾನ್ ಅವರ ಚಕ್ ದೇ ಇಂಡಿಯಾ ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ನಮ್ಮ ಟಿವಿ 9 ಬೌಂಡರಿ ಲೈನ್ ನ ಟಿ-ಟ್ವೆಂಟಿ ವಿಶ್ವಕಪ್ ವಿಶೇಷ ಕಾರ್ಯಕ್ರಮಕ್ಕೂ ನಾವಿಟ್ಟ ಹೆಸರು ಕೂಡ ಚಕ್ ದೇ ಇಂಡಿಯಾ..!
ಇನ್ನೊಂದು ಅಚ್ಚರಿ ಅಂದ್ರೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಗ ಮಹೇಂದ್ರ ಸಿಂಗ್ ಧೋನಿಯವರು ನಾಯಕನಾಗಿ ಆಯ್ಕೆಯಾದ್ರು. ಹಾಗೇ ನಮ್ಮ ಟಿವಿ 9 ಸಂಸ್ಥೆಯ ಮುಖ್ಯಸ್ಥರ ಹೆಸರು ಕೂಡ ಮಹೇಂದ್ರ ಮಿಶ್ರಾ.. ಮಿಶ್ರಾ ಸರ್ ಅವರ ಪ್ಲಾನಿಂಗ್, ಶಿಸ್ತು, ಬೈಗುಳ ಅದನ್ನು ಊಹಿಸಿಕೊಳ್ಳಲೂ
ಸಾಧ್ಯವಿಲ್ಲ. ಒಂಥರಾ ಭಯದಿಂದಲೇ ಮಾತನಾಡಿಸಬೇಕಾದ ಪರಿಸ್ಥಿತಿ ನನ್ನದಾಗಿತ್ತು. ಆದ್ರೆ ಟಿವಿ 9 ಸಂಸ್ಥೆಯ ಪ್ರಧಾನ ನಿರ್ಮಾಪಕರಾದ ರವಿಕುಮಾರ್ ಸರ್ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದರು.
ಕಾರ್ಯಕ್ರಮದ ಪ್ರೋಮೋ ಗೆ ಪ್ರೊಡಕ್ಷನ್ ವಿಭಾಗದ ಟೈಗರ್ ಬಾಬು ಮತ್ತು ವಿಲಾಸ್ ಅವರು ಹೊಸತನವನ್ನು ತುಂಬಿದ್ದರು. ಸಿದ್ದೇಶ್ ನೇತೃತ್ವದ ಗ್ರಾಫಿಕ್ಸ್ ಟೀಮ್ ಹೊಸ ವಿನ್ಯಾಸಗಳಿಂದ ಟಿವಿ ಸ್ಕ್ರೀನ್ ನ ಅಂದವನ್ನು ಹೆಚ್ಚಿಸಿದ್ದರು. ನಮ್ಮ ಕ್ರೀಡಾ ವಿಭಾಗಕ್ಕೆ ಜೀವನ್, ಪ್ರಮೋದ್, ಗಂಗಾಧರ್ ಜೊತೆಗೆ ಗುರುಕುಸ್ಗಲ್ ಮತ್ತು ಚಂದ್ರೇಗೌಡ ಹೆಚ್ಚುವರಿಯಾಗಿ ಸೇರಿಕೊಂಡಿದ್ದರು. 2007ರ ವಿಶ್ವಕಪ್ ಅಂದ್ರೆ ಅದೊಂದು ರೀತಿಯಲ್ಲಿ ಹಬ್ಬದ ಸಂಭ್ರಮ. ವಿಭಿನ್ನ ಮಾದರಿಯ ಕಾರ್ಯಕ್ರಮಗಳಿಗೆ ಅಚ್ಚುಕಟ್ಟಾಗಿ ಸ್ಕ್ರಿಪ್ಟ್ ಬರೆದು ಅದಕ್ಕೆ ದೃಶ್ಯ ವೈಭವ ನೀಡಿದ್ದು ತೀರ್ಥ ಪ್ರಸಾದ್, ಚೇತನ್, ಅಶೋಕ್, ಉಮೇಶ್, ಪ್ರವೀಣ್ ಹಾಗೂ ಮಂಜುನಾಥ್. ನನಗೆ ಇನ್ನೂ ನೆನಪಿದೆ. ಚೊಚ್ಚಲ ವಿಶ್ವಕಪ್ ಟೂರ್ನಿಯ ಶುರುವಾದ ದಿನದಿಂದ ಅದು ಮುಗಿಯುವ ತನಕ ನನ್ನ
ಮೊಬೈಲ್‍ಗೆ ಸರಿಯಾಗಿ 9 ಗಂಟೆ 5 ನಿಮಿಷಕ್ಕೆ ಮೇಸೆಜ್ ಬರುತ್ತಿತ್ತು. ಕಾರ್ಯಕ್ರಮ ನೋಡಿ ಮೆಚ್ಚುಗೆಯ ಮೇಸೆಜ್. ಅದು ಪ್ರಧಾನ ನಿರ್ಮಾಪಕರಾದ ರವಿ ಕುಮಾರ್ ಸರ್ ಅವರದ್ದು. ಕ್ರಿಕೆಟ್ ತಾರೆಗಳ ಫೋಟೋಗಳನ್ನು ಬಳಸಿಕೊಂಡು ಅದಕ್ಕೆ ಸಿನಿಮಾ ಹಾಡುಗಳನ್ನು ಪೋಣಿಸಿದಂತದ ವಿಡಿಯೋ ಎಡಿಟರ್‍ಗಳ ಕೈಚಳಕವನ್ನು ಮಾತ್ರ ಎಂದಿಗೂ ಮರೆಯಲಾಗದು. ಅದ್ರಲ್ಲೂ ಧೋನಿಯ ವಿಚಾರದಲ್ಲೇ ನಾನು ಮತ್ತು ಆಗ ವಿಡಿಯೋ ಎಡಿಟರ್ ಆಗಿದ್ದ ಮಂಜುನಾಥ್ ನಡುವೆ ಕಿತ್ತಾಟಗಳು ನಡೆಯುತ್ತಲೇ ಇರುತ್ತಿತ್ತು. ಪುನೀತ್ ರಾಜ್ ಕುಮಾರ್ ಅವರ ಮಿಲನ ಚಿತ್ರದ ನಿನ್ನಿಂದಲೇ ಹಾಡಿಗೆ ಧೋನಿಯನ್ನು ಬಳಸಿಕೊಂಡು ಎರಡು ನಿಮಿಷಗಳ ಪ್ಯಾಕೇಜ್ ಮಾಡಬೇಕು ಎಂದು ಹೇಳಿದಾಗ ಆಗಲ್ಲ ಅಂದಾಗ ಜೋರು ಜಟಾಪಟಿಯೇ ಆಗಿತ್ತು. ಯಾವಾಗಲೂ ಕೂಲ್ ಆಗಿಯೇ ಇರುತ್ತಿದ್ದ ನಾನು ಅವತ್ತು ಟಿವಿ 9 ಡೆಸ್ಕ್ ನಲ್ಲಿ ಜೋರಾಗಿ ಬೊಬ್ಬೆ ಹೊಡೆದಿದ್ದೆ. ನನ್ನ ಸಿಟ್ಟನ್ನು ನೋಡಿದ ಅಂದಿನ ರಾತ್ರಿಯ ಬುಲೆಟಿನ್ ಪ್ರೊಡ್ಯೂಸರ್(ಬಿಪಿ) ಕಬೀರ್ ಸಮಾಧಾನಪಡಿಸಿದ್ದ. ಅರ್ಧಗಂಟೆ ಬಿಟ್ಟು ಮತ್ತೆ ಮಂಜುನನ್ನು ಕರೆದು ಮಾತನಾಡಿಸಿ, ನಿನ್ನಿಂದಲೇ ಹಾಡಿಗೆ ಧೋನಿಯ ಚಿತ್ರಗಳನ್ನು ಬಳಸಿಕೊಂಡು ಪ್ಯಾಕೇಜ್ ಮಾಡಿದ್ದೆವು. ಈ ರೀತಿಯ ಅನೇಕ ಘಟನೆಗಳು ಘಟಿಸಿದ್ದವು.
ಈ ನಡುವೆ, ಚೊಚ್ಚಲ ಟಿ-ಟ್ವೆಂಟಿಯಲ್ಲಿ ಟೀಮ್ ಇಂಡಿಯಾದ ಲೀಗ್ ನಿಂದ ಸೆಮಿಫೈನಲ್ ತನಕದ ಪಂದ್ಯಗಳಲ್ಲಿ ಗೆಲುವು ಸಾಧಿಸಿದಾಗ ಸುದ್ದಿ ಮನೆಯ ವಾತಾವರಣ ಹಬ್ಬದಂತೆ ಇತ್ತು. ಆಗ ಬುಲೆಟಿನ್ ಪ್ರೊಡ್ಯೂಸರ್ ಆಗಿದ್ದ ನಾಗಭೂಷಣ್ ಕೂಡ ಮೊದಲಿಗೆ ಕ್ರೀಡಾ ವರದಿಗಾರರಾಗಿದ್ದವರು. ಹೀಗಾಗಿ ಡೆಸ್ಕ್ ಟೀಮ್ ಕೂಡ ಬೇಗನೇ ಅಲರ್ಟ್ ಆಗುತ್ತಿತ್ತು. ನಮಗೂ ಸಾಥ್ ನೀಡುತ್ತಾ ಇದ್ದರು. ಮತ್ತೊಂದೆಡೆ ನಿರೂಪಕರಾಗಿದ್ದ ರೆಹಮಾನ್ ಹಾಸನ್ ಮತ್ತು ಹಮೀದ್ ಸರ್ ಕೂಡ ಕಾರ್ಯಕ್ರಮಕ್ಕೆ ಹೊಸ ಮೆರಗನ್ನು ನೀಡಿದ್ದರು. ಅಂಕಪ್ಪ, ಮುರಳಿಯವರ ಪಿಸಿಆರ್ ಟೀಮ್ ಎಷ್ಟೇ ಒತ್ತಡಗಳಿದ್ರೂ ಅಷ್ಟೇ ತಾಳ್ಮೆಯಿಂದಲೇ ಕೆಲಸ ಮಾಡುತ್ತಿದ್ದರು.
ಸೆಪ್ಟಂಬರ್ 24, 2007 ಭಾರತ ಮತ್ತು ಪಾಕಿಸ್ತಾನ ಫೈನಲ್ ಪಂದ್ಯ..
ಫೈನಲ್ ಪಂದ್ಯ ಅಂದ್ರೆ ಹೇಳಬೇಕಾ.. ಅದರಲ್ಲೂ ಅದು “ಭಾರತ ಮತ್ತು ಪಾಕಿಸ್ತಾನ” ನಡುವಿನ ಪಂದ್ಯ ಅಂದ್ರೆ ಅದರ ಗಮತ್ತು ಬೇರೆಯದ್ದೇ ಆಗಿರುತ್ತದೆ. ಒಂದು ದಿನ ಮುಂಚಿತವಾಗಿಯೇ ಕಾರ್ಯಕ್ರಮದ ಪ್ಲಾನ್ ಗಳಿಗೆ ನಾಲ್ಕೈದು ಬಾರಿ ಮೀಟಿಂಗ್ ನಡೆದಿದ್ದವು. ಅಂತಿಮವಾಗಿ ಫೈನಲ್ ಪಂದ್ಯದಂದು ಮಧ್ಯಾಹ್ನ 12 ಗಂಟೆಯಿಂದ ನೇರ ಪ್ರಸಾರ “ಚಕ್ ದೇ ಇಂಡಿಯಾ” ವಿಶೇಷ ಕಾರ್ಯಕ್ರಮ ಅಂತ ಫಿಕ್ಸ್ ಆಗಿತ್ತು. ರಾಜಕೀಯ, ಸಿನಿಮಾ, ಕ್ರೈಮ್, ಮೆಟ್ರೋ, ಕ್ರೀಡೆ ಹೀಗೆ ಎಲ್ಲಾ ಪರಿಣತರನ್ನು ಸ್ಟುಡಿಯೋಗೆ ಕರೆಸಿ ಮಾತನಾಡಿಸುವುದು. ಅದಕ್ಕೆ ತಕ್ಕಂತೆ ಎಲ್ಲ ಗೆಸ್ಟ್ ಗಳ ಪಟ್ಟಿಯೂ ರೆಡಿಯಾಗಿತ್ತು. ಮಿಶ್ರಾ ಸರ್, ಟೂರ್ನಿಗೆ ಸಂಬಂಧ ಪಟ್ಟಂತೆ ಗ್ರಾಫಿಕ್ಸ್ ಗಳು ಬೇಕು ಅಂತ ಹೇಳಿದ್ದರು. ಅದು ಕೂಡ ರೆಡಿಯಾಗ್ತಾ ಇತ್ತು. ಕ್ರೀಡಾ ವಿಭಾಗ ಮತ್ತು, ಎಡಿಟರ್ ಗಳಾದ ತೀರ್ಥ, ಚೇತನ್, ಅಶೋಕ್, ಪ್ರವೀಣ್, ಉಮೇಶ್ ಮತ್ತು ಗ್ರಾಫಿಕ್ಸ್ ಟೀಮ್ ಹುಡುಗರು ಕೂಡ ರಾತ್ರಿ ಪೂರ್ತಿ ಕಚೇರಿಯಲ್ಲಿದ್ದುಕೊಂಡು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು.
ಸೆಪ್ಟಂಬರ್ 24, 2007ರಂದು ಮಧ್ಯಾಹ್ನ 12 ಗಂಟೆಗೆ ನೇರ ಪ್ರಸಾರ ಕಾರ್ಯಕ್ರಮ. ಅದಕ್ಕೂ ಮೊದಲೇ ಬೆಳಗ್ಗೆಯಿಂದಲೇ ಕ್ರಿಕೆಟ್ ಬಿಟ್ಟು ಬೇರೆ ಸುದ್ದಿಗಳು ಹೋಗುತ್ತಿರಲಿಲ್ಲ. ಕ್ರೀಡಾ ವಿಭಾಗದಿಂದ 11 ಗಂಟೆಯಿಂದಲೇ ‘ಟೂರ್ನಿಯಲ್ಲಿ ಟೀಮ್ ಇಂಡಿಯಾ ಮತ್ತು ಪಾಕ್ ತಂಡಗಳ ಫೈನಲ್ ಹಾದಿ ಹೇಗಿತ್ತು’ ಎಂಬುದರ ಕುರಿತು ಒಂದು ಗಂಟೆ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಇಲ್ಲಿ
ಒಂದು ಸಣ್ಣ ಗೊಂದಲವಾಗಿತ್ತು. ಮುಂದೆ 12 ಗಂಟೆಗೆ ನೇರ ಪ್ರಸಾರ ಕಾರ್ಯಕ್ರಮ ಶುರುವಾಗಬೇಕಿತ್ತು. ಆಗ ತಾಂತ್ರಿಕ ತೊಂದರೆಯಿಂದ ಸ್ವಲ್ಪ ಎಡವಟ್ಟಾಗಿಬಿಟ್ಟಿತ್ತು. ಅಷ್ಟೇ. ಮಿಶ್ರಾ ಸರ್ ಸಿಟ್ಟು ನೆತ್ತಿಗೇರಿತ್ತು. ಆಗ ಶುರುವಾಗಿದ್ದೇ ಬೈಗುಳ, ಮನಸಿಗೆ ಸ್ವಲ್ಪ ಬೇಜಾರಾಗಿತ್ತು. ಆದರೂ ತಪ್ಪು ನಮ್ಮದೇ ಆಗಿರುವುದರಿಂದ ತಪ್ಪನ್ನು ಒಪ್ಪಿಕೊಂಡು ನಾನು ಮರು ಉತ್ತರ ನೀಡಲಿಲ್ಲ. ಮೊದಲೇ ರಾತ್ರಿ ಪೂರ್ತಿ ನಿದ್ದೆ ಇಲ್ಲ. ಬೈಗುಳ ಬೇರೆ. ಆಗ ನನ್ನ ಪರಿಸ್ಥಿತಿಯನ್ನು ನೋಡಿದ್ದ ರವಿ ಸರ್, “ಸನತ್ ನೀವು ಮೇಲುಗಡೆ ಹೋಗಿ ಗ್ರಾಫಿಕ್ಸ್ ಕಳಿಸಿ, ಇಲ್ಲಿ ನಾನು ಬ್ಯಾಲೆನ್ಸ್ ಮಾಡುತ್ತೇನೆ. ತಲೆಕೆಡಿಸಿಕೊಳ್ಳಬೇಡಿ” ಎಂದು ಧೈರ್ಯ ತುಂಬಿದ್ದರು.
ಹಾಗೇ 12.15ರ ಹೊತ್ತಿಗೆ ಎಲ್ಲವೂ ಸರಿ ಹೊಯ್ತು. ಎಲ್ಲವೂ ಅಂದುಕೊಂಡಂತೆ ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿತ್ತು. ಸಿನಿ ತಾರೆಯರು, ಕ್ರಿಕೆಟ್ ವಿಶ್ಲೇಷಕರು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಬೇರೆ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದರು. ಕ್ಯಾಮೆರಾ ವಿಭಾಗದ ಮುಖ್ಯಸ್ಥರಾದ ಗೋಪಿ ಮತ್ತು ಅವರ ತಂಡದವರು ಸ್ಟುಡಿಯೋವನ್ನು ಬಹಳ ಸುಂದರವಾಗಿ ಅಲಂಕಾರಗೊಳಿಸಿದ್ದರು.
ಹಾಗೇ ಪಂದ್ಯವೂ ಶುರುವಾಗಿತ್ತು. ಇನ್ನೇನು ನೇರ ಪ್ರಸಾರ ಸಾಕು. ಪಂದ್ಯ ಮುಗಿದ ನಂತರ ಮತ್ತೆ ನೇರ ಪ್ರಸಾರ ಕಾರ್ಯಕ್ರಮ ಮಾಡೋಣ ಅಂತ ಮಾತನಾಡುತ್ತಿರುವಾಗಲೇ ಮಿಶ್ರಾ ಸರ್ ಮತ್ತೆ, ನೇರ ಪ್ರಸಾರ ಕಾರ್ಯಕ್ರಮ ಮುಂದುವರಿಸಿ ಅಂತ ಆದೇಶ ನೀಡಿದ್ದರು. ಟಿವಿ ಸ್ಕ್ರೀನ್‍ನ ಸಣ್ಣ ವಿಂಡೋದಲ್ಲಿ ಪಂದ್ಯ ನೇರ ಪ್ರಸಾರದ ದೃಶ್ಯಗಳು ಹೋಗುತ್ತಿದ್ದವು. ಕ್ರಿಕೆಟ್ ವಿಶ್ಲೇಷಕರು ಅದನ್ನು ನೋಡಿಕೊಂಡೇ ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದರು.
ಇನ್ನು ಪಂದ್ಯದ ಕೊನೆಯ ಓವರ್. ಟಿವಿ 9 ಡೆಸ್ಕ್ ನಲ್ಲಿ ಎಲ್ಲರೂ ಕೂಡ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಬಿಪಿಗಳು ಮತ್ತು ಕ್ರೀಡಾ ಟೀಮ್ ಬ್ರೇಕಿಂಗ್ ಪಾಯಿಂಟ್ಸ್ ಸಿದ್ದಮಾಡಿಕೊಳ್ಳುತ್ತಿದ್ದರು. ವಿಡಿಯೋ ಎಡಿಟರ್ ಗಳು ವಿಶ್ಯೂವಲ್ಸ್ ಗಳನ್ನು ಕಳುಹಿಸಿದ್ದರು. ಒಂದು ಕಡೆ ಟೆನ್ಷನ್. ಮತ್ತೊಂದು ಕಡೆ ಕೆಲಸದ ಒತ್ತಡ. ಕೊನೆಗೂ ಜೋಗಿಂದರ್ ಶರ್ಮಾ ಎಸೆತದಲ್ಲಿ ಮಿಸ್ಬಾ ಉಲ್ ಹಕ್ ಶ್ರೀಶಾಂತ್‍ಗೆ ಕ್ಯಾಚ್ ನೀಡುತ್ತಿರುವಾಗಲೇ ಟಿವಿ9 ಟೀಮ್ ನ ಸಂಭ್ರಮ ಮುಗಿಲು ಮುಟ್ಟಿತ್ತು. ಮೆಟ್ರೋ, ಕ್ರೈಮ್, ಸಿನಿಮಾ ವಿಭಾಗದ ವರದಿಗಾರರು ಸ್ವಇಚ್ಛೆಯಿಂದಲೇ ಫೀಲ್ಡ್ ಗೆ ಇಳಿದಿದ್ದರು. ಬೆಂಗಳೂರಿನಲ್ಲಿ ಟಿ-ಟ್ವೆಂಟಿ ಗೆಲುವಿನ ಸಂಭ್ರಮದ ದೃಶ್ಯಗಳನ್ನು ಸುದ್ದಿ ಮನೆಗೆ ಕಳಹಿಸುತ್ತಿದ್ದರು. ಹಾಗೇ ಜಿಲ್ಲಾ ವರದಿಗಾರರು ಕೂಡ ಫೀಲ್ಡ್ ಗೆ ಇಳಿದು, ಕರ್ನಾಟಕದ ಸಂಭ್ರಮವನ್ನು ಕಚೇರಿಗೆ ತಲುಪಿಸಿ ವೀಕ್ಷಕರಿಗೆ ರಸದೌತಣವನ್ನು ಉಣಬಡಿಸಿದ್ದರು.
ಇತ್ತ ಟಿವಿ-9 ಕಚೇರಿಯಲ್ಲಿ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲಾ ಹುಡುಗರು ಕಾರಿಡಾರ್ ಗೆ ಬಂದು ಡ್ಯಾನ್ಸ್ ಮಾಡಲು ಶುರು ಮಾಡಿದ್ದರು. ಹಾಗೇ ಅತಿಥಿಯಾಗಿ ಬಂದಿದ್ದ ಪೂಜಾ ಗಾಂಧಿ ಕೂಡ ಹೆಜ್ಜೆ ಹಾಕಿದ್ದರು. ಅದು ಎಷ್ಟರ ಮಟ್ಟಿಗೆ ಅಂದ್ರೆ ಟಿವಿ ನೈನ್ ಕಚೇರಿಯ ಎದುರಿನ ರಸ್ತೆ ಕೂಡ ಬ್ಲ್ಯಾಕ್ ಆಗಿ ಹೋಯ್ತು. ಪಕ್ಕದಲ್ಲಿದ್ದ ಹಾಕಿ ಕ್ಲಬ್ ನಲ್ಲಿದ್ದ ಹುಡುಗರು, ಶಾಂತಿನಗರದಿಂದ ಆ ಕಡೆ ಈ ಕಡೆ ಸುತ್ತಾಡಿಕೊಂಡು ಹೋಗುತ್ತಿದ್ದ ಹುಡುಗರು ಕೂಡ ಈ ಸಂಭ್ರಮಕ್ಕೆ ಸಾಕ್ಷಿಯಾದ್ರು.
ಆದರೆ ಈ ಖುಷಿ- ಸಂಭ್ರಮವನ್ನು ಹಂಚಿಕೊಳ್ಳುವ ಸ್ಥಿತಿಯಲ್ಲಿ ನಾವು ಇರಲಿಲ್ಲ. ನಮ್ಮ ಕ್ರೀಡಾ ವಿಭಾಗದ ಹುಡುಗರು ಮತ್ತು ಡೆಸ್ಕ್ ಹುಡುಗರು, ವಿಡಿಯೋ ಎಡಿಟರರ್ಸ್ ಹಾಗೂ ಪಿಸಿಆರ್, ಕ್ಯಾಮೆರಾ ಟೀಮ್ ಫುಲ್ ಬಿಝಿಯಾಗಿದ್ದರು. ಟೀಮ್ ಇಂಡಿಯಾ ಹುಡುಗರು ವಿಶ್ವಕಪ್ ಟ್ರೋಫಿ ಗೆದ್ದ ಖುಷಿಯಲ್ಲಿ ತೇಲಾಡುತ್ತಿದ್ರೆ, ನಾವು ನಾಳೆಯ ಕಾರ್ಯಕ್ರಮಕ್ಕೆ ಪ್ಲಾನ್ ಮಾಡಿಕೊಂಡು ನಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವು. ಒಂದು ಕಡೆ ಸುಸ್ತು, ನಿದ್ದೆ ಇಲ್ಲದೇ ಮಂಕಾಗಿ ಹೋಗಿದ್ರೂ ಕೂಡ ಇಷ್ಟು ದಿನ ಚೆನ್ನಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ನಾಳೆ ರೆಸ್ಟ್ ಮಾಡಿದರಾಯ್ತು ಅಂತ ಜಿದ್ದಿಗೆ ಬಿದ್ದವರಂತೆ ಮತ್ತೆ ಕೆಲಸದಲ್ಲಿ ನಿರತರಾದೆವು.
ಆಗ ನಮ್ಮ ಫ್ಲೋರ್ ಗೆ ಆಗಮಿಸಿದ್ದು ಮಹೇಂದ್ರ ಮಿಶ್ರಾ ಸರ್. ಮಧ್ಯಾಹ್ನ ಬೈಸಿಕೊಂಡಿದ್ದೆ. ಇನ್ನೇನೂ ಕಾದಿದೆಯೋ. ಇನ್ನೇನು ಕಾರ್ಯಕ್ರಮ ಹೇಳ್ತಾರೋ ಅನ್ನೋ ಆತಂಕ. ಸೀದಾ ನಮ್ಮ ಡೆಸ್ಕ್ ಬಳಿ ಬಂದ ಮಿಶ್ರಾ ಸರ್ ಹಗ್ ಮಾಡಿಕೊಂಡು “ಗುಡ್ ಜಾಬ್. ವೆಲ್ ಡನ್ ಗಯ್ಸ್ ..” ಅಂತ ಹೇಳಿದ್ದರು. ಹಾಗೇ ನಮ್ಮ ಬ್ಯೂರೋ ಹುಡುಗರಿಗೂ ಇದೇ ರೀತಿ ಹಗ್ ಮಾಡಿಕೊಂಡು ಇದೇ ಮಾತನ್ನು ಹೇಳಿದ್ದರು.
ಅಂದಿನ ಆ ಘಟನೆ ಇಂದಿಗೂ ನನಗೆ ನೆನಪಿನಲ್ಲಿದೆ. ಇದಕ್ಕೆ ಕಾರಣವಾಗಿದ್ದು ಮಹೇಂದ್ರ ಸಿಂಗ್ ಧೋನಿ. ಧೋನಿ ನಾಯಕತ್ವದಲ್ಲಿ ಅಂದು ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲದೇ ಇರುತ್ತಿದ್ದರೆ ಸುದ್ದಿ ಮನೆಯಲ್ಲಿ ಈ ರೀತಿಯ ಸಂಭ್ರಮ ಮೂಡುತ್ತಿರಲಿಲ್ಲ. ಈ ರೀತಿಯ ಬೆಂಬಲ, ಪ್ರೋತ್ಸಾಹ, ಪ್ರೇರಣೆ, ಪ್ರೀತಿ ಸಿಗುತ್ತಿರಲಿಲ್ಲ. ಸುದ್ದಿ ಮನೆಯಲ್ಲಿ ಜಾತ್ರೆ, ಹಬ್ಬದ ಸಂಭ್ರಮದಲ್ಲಿ ಕೆಲಸ ಮಾಡುವಂತೆ ಮಾಡಿದ್ದು ಕೂಡ ಧೋನಿ ನಾಯಕತ್ವ. ಇದೇ ವೇಳೆ ನೀವು ಇನ್ನೊಂದು ಪ್ರಶ್ನೆ ಕೇಳಬಹುದು.. “ಬೇರೆ ಕ್ರೀಡೆಗಳಲ್ಲಿ ಭಾರತ ಚಾಂಪಿಯನ್ ಆದಾಗ ಯಾಕೆ ಆ ರೀತಿಯ ಸಂಭ್ರಮವಿರುವುದಿಲ್ಲ?. ಮಾಧ್ಯಮಗಳು ಯಾಕೆ ಬೇರೆ ಕ್ರೀಡೆಗಳಿಗೆ ಉತ್ತೇಜನ ನೀಡಲ್ಲ?”ಅಂತ. ಇದಕ್ಕೆ ನನಗೂ ಇನ್ನೂ ಉತ್ತರ ಸಿಕ್ಕಿಲ್ಲ. ಆದ್ರೆ ಟಿಆರ್ ಪಿ ಎಂಬ ಲೆಕ್ಕಚಾರದಲ್ಲಿ ಹೇಳುವುದಾದ್ರೆ ಕ್ರಿಕೆಟ್ ಬಿಟ್ರೆ ಬೇರೆ ಕ್ರೀಡೆಗಳಿಗೆ ಹೆಚ್ಚಿನ ವೀಕ್ಷಕರು ಸಿಗಲ್ಲ. ಬೇರೆ ಕ್ರೀಡೆಗಳ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಮಾಡಿದ್ರೂ ಅದನ್ನು ನೋಡುವ ವೀಕ್ಷಕರ ಸಂಖ್ಯೆ ತೀರಾ ಕಮ್ಮಿ ಇರುತ್ತದೆ. ಹೀಗಾಗಿ ಸುದ್ದಿ ಮಾಧ್ಯಮಗಳು ಕ್ರಿಕೆಟ್‍ಗೆ ಹೆಚ್ಚಿನ ಆದ್ಯತೆ ನೀಡುತ್ತವೆ.
ಒಟ್ಟಿನಲ್ಲಿ ಹೊಸ ಮಾದರಿಯ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದುಕೊಂಡಿತ್ತು. ಅದೇ ರೀತಿ ಟಿವಿ ನೈನ್ ಸಂಸ್ಥೆಯ ಮುಖಸ್ಥರಾದ ಮಹೇಂದ್ರ ಮಿಶ್ರಾ ಅವರ ಸಾರಥ್ಯದಲ್ಲಿ ನಮ್ಮ ಬೌಂಡರಿ ಲೈನ್ ಕಾರ್ಯಕ್ರಮದ ಮೂಲಕ ಕ್ರಿಕೆಟ್ ನಲ್ಲೂ ಈ ರೀತಿಯ ಕಾರ್ಯಕ್ರಮ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟಿತ್ತು. ಇದು ನನ್ನ ಹೆಮ್ಮೆ.. ನಮ್ಮ ಟೀಮ್ ನ ಸಾರ್ಥಕತೆ.!
ಸನತ್ ರೈ
ಪ್ರಧಾನ ಸಂಪಾದಕರು
ಸಾಕ್ಷಾ ಟಿವಿ.ಕಾಮ್
(ಸೂಚನೆ: ಭಾಗ -2 ರಲ್ಲಿ ಸಮಯ ರನ್ ಭೂಮಿಯಲ್ಲಿ ಅರ್ಜುನನಾಗಿ ಮಹೇಂದ್ರ ಸಿಂಗ್ ಧೋನಿ ಮುಂದುವರಿಯುವುದು)








