ಹಾವೇರಿ ; ನ್ಯಾಯಾಲಯ ನಿಂದನೆ ಆರೋಪದಲ್ಲಿ ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ವಿಷಾಧ ವ್ಯಕ್ತಪಡಿಸಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿ ಹಾಗೂ ಹಾನಗಲ್ ನ್ಯಾಯವಾದಿ ಸಂಘದಿಂದ ಹಾವೇರಿ ನಗರದ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದರಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಅವರು ಭಾಗಿಯಾಗಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ವೋಚ್ಚ ನ್ಯಾಯಾಲಯದ ಸದರಿ ತೀರ್ಪು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ. ಪ್ರಶಾಂತ್ ಅವರು ಎರಡು ಟ್ವೀಟ್ ಮಾಡಿದ್ದು, ಈ ಟ್ವೀಟ್ಗಳು ಭಾರತೀಯ ಪ್ರಜಾಪ್ರಭುತ್ವದ ಮುಖ್ಯ ಸ್ತಂಬದ ಅಡಿಪಾಯಗಳನ್ನು ದುರ್ಬಲಗೊಳಿಸುವ ಪ್ರಯತ್ನ, ಹೀಗಾಗಿ ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಆದರೆ, ಪ್ರಶಾಂತ್ ಭೂಷಣ್ ತುರ್ತು ಪರಿಸ್ಥಿತಿಗೆ ಸಮಾನವಾದ ಸ್ಥಿತಿಯನ್ನು ಸರ್ವೋಚ್ಚ ನ್ಯಾಯಾಲಯವು ತಂದಿರುವದು ಅಪಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರ ಟ್ವೀಟ್ ಗಳನ್ನು ನಿರ್ಲಕ್ಷಿಸಬಹುದಿತ್ತು. ಅವರನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ನೀಡುತ್ತಿರುವದರಿಂದ ನ್ಯಾಯಾಲಯವು ಗೌರವವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಈ ಟ್ವೀಟ್ಗಳನ್ನು ನಿರ್ಲಕ್ಷಿಸಬೇಕು ಮತ್ತು ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ನೀಡಲಾಗಿರುವ ತೀರ್ಪನ್ನು ಹಿಂಪಡಿಯಬೇಕೆಂದು” ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.









