ವಿಶ್ವದ ಹಿರಿಯಣ್ಣನಿಗೂ ಈಗ ಭಾರತೀಯ ಮತದಾರರೇ ಬೇಕು; ಕುತೂಹಲ ಕೆರಳಿಸಿರುವ ಈ ಬಾರಿಯ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ:
ವಾಷಿಂಗ್ಟನ್, ಅಗಸ್ಟ್21: ವಿಶೇಷವಾಗಿ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚಿನ ಕುತೂಹಲ ಸೃಷ್ಟಿಸಿದೆ. ಇದಕ್ಕೆ ಕಾರಣ ಭಾರತ ಮೂಲದ ಅಮೆರಿಕನ್ನರು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು. ನವೆಂಬರ್ 3 ರಂದು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಯುಎಸ್ಎ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬಿಡನ್ ಇಬ್ಬರೂ ಪ್ರಬಲ ಅಭ್ಯರ್ಥಿಗಳೇ. ಇಬ್ಬರೂ ಭಾರತೀಯ ಮೂಲದ ಅಮೆರಿಕನ್ ಮತದಾರರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದೂ ವಾಯ್ಸಸ್ ಫಾರ್ ಟ್ರಂಪ್ ಅಭಿಯಾನವನ್ನು ರಿಪಬ್ಲಿಕನ್ ಪಕ್ಷ ಪ್ರಾರಂಭಿಸಿದರೆ, ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ ಎಂಬ ಅಭಿಯಾನ ಮತ್ತು ವಿಚಾರ ಸಂಕಿರಣವನ್ನು ಡೆಮಾಕ್ರಟಿಕ್ ಪಕ್ಷ ಪ್ರಾರಂಭಿಸಿದೆ. ಇಲ್ಲಿ ವಿಶೇಷ ಎಂದರೆ ನಿರ್ಣಾಯಕರಾಗೊರುವ ಭಾರತೀಯ ಮೂಲದ ಗ್ರೀನ್ ಕಾರ್ಡ್ ಹೋಲ್ಡರ್ ಮತದಾರರ ಗಮನ ಸೆಳೆಯಲು ಅಮೇರಿಕಾದ ರಿಪಬ್ಲಿಕನ್ ಹಾಗೂ ಡೆಮೋಕ್ರಾಟಿಕ್ ಎರಡೂ ಪಕ್ಷಗಳು ಪ್ರಯತ್ನ ನಡೆಸುತ್ತಿರುವುದು. ಇಬ್ಬರೂ ಅಧ್ಯಕ್ಷೀಯ ಆಕಾಂಕ್ಷಿಗಳಿಗೆ ಭಾರತೀಯ ಮೂಲದ ಮತದಾರರ ಮೇಲೆ ಕಣ್ಣಿದೆ. ಆದ್ರೆ ಭಾರತೀಯ ಆರಿಜನ್ ಮತದಾರ ಪ್ರಭುಗಳು ಯಾರಿಗೆ ಆಶಿರ್ವಾದ ನೀಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.
ಸಾಧಾರಣವಾಗಿ ಅಮೆರಿಕ ಚುನಾವಣೆ ಎಂದರೆ ಅಲ್ಲಿನ ಸಮಸ್ಯೆಗಳ ಬಗ್ಗೆ ಮತ್ತು ಅವುಗಳ ಪರಿಹಾರ ಗಳ ಬಗ್ಗೆ ಭಾಷಣಗಳು ಮೊಳಗುತ್ತದೆ. ಆದರೆ ಈ ಬಾರಿ ರಿಪಬ್ಲಿಕನ್ ಪಕ್ಷದ ಅಭಿಯಾನದಲ್ಲಿ ಅಮೆರಿಕ-ಭಾರತ ಸಂಬಂಧ, ಧಾರ್ಮಿಕ ಸ್ವಾತಂತ್ರ್ಯ ಗಳ ಬಗ್ಗೆ ಪ್ರಸ್ತಾಪವಾಗುತ್ತಿದ್ದರೆ, ಡೆಮಾಕ್ರಟಿಕ್ ಚುನಾವಣಾ ಪ್ರಚಾರದಲ್ಲಿ ಎಚ್1ಬಿ ವೀಸಾ ನಿಯಮಗಳ ತಿದ್ದುಪಡಿ, ಹಿಂದೂಗಳ ನಂಬಿಕೆಗೆ ಆದ್ಯತೆ, ವರ್ಣ ಭೇದ ಭಾವಗಳಿಲ್ಲದ ಹೊಸ ಸಮಾಜ ಕಟ್ಟುವಿಕೆ ಇತ್ಯಾದಿ ವಿಚಾರಗಳು ಪ್ರಸ್ತಾಪವಾಗುತ್ತಿದೆ. ಅಷ್ಟೇ ಅಲ್ಲ ಡೆಮೊಕ್ರಾಟಿಕ್ ಪಕ್ಷವು ಕ್ಯಾಲಿಫೋರ್ನಿಯಾ ಸಂಸದೆ ಭಾರತ ಮೂಲದ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿಯೂ ಘೋಷಿಸಿದೆ. ಜೊತೆಗೆ ಭಾರತೀಯರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅವರ ಕುಂದು ಕೊರತೆಗಳನ್ನು ಅಲಿಸುವ ಪೋರಂ ಅನ್ನು ಕೂಡ ಪ್ರಾರಂಭಿಸಿದೆ.
ಇದಕ್ಕೆಲ್ಲಾ ಕಾರಣವಾಗಿರುವುದು ಭಾರತೀಯರು ಅಲ್ಲಿ ನಾಲ್ಕನೇ ಅತಿ ಮುಖ್ಯ ಸಮುದಾಯ ಎನಿಸಿರುವುದು ಮತ್ತು ಚುನಾವಣೆಯಲ್ಲಿ ಅವರ ಮತ ನಿರ್ಣಾಯಕವೆನಿಸಿರುವುದು. ಅಮೆರಿಕದ ಒಟ್ಟು ಜನಸಂಖ್ಯೆಯ ಶೇ.1 ರಷ್ಟು ಭಾರತೀಯರು ಅಲ್ಲಿದ್ದರೂ ಚುನಾವಣೆಯಲ್ಲಿ ಅವರ ಮತ ಪ್ರಾಮುಖ್ಯ ಪಡೆದಿದೆ.
ಅಮೆರಿಕದಲ್ಲಿರುವ ಭಾರತೀಯರ ಒಟ್ಟು ಸಂಖ್ಯೆ 38 ಲಕ್ಷ ದಾಟಿದ್ದು, ಅವರ ಒಟ್ಟು ವಾರ್ಷಿಕ ಆದಾಯ ಸರಾಸರಿ 80 ಲಕ್ಷ ರೂ. ಆಗಿದೆ. ಇದು ಅಮೆರಿಕನ್ನರ ವಾರ್ಷಿಕ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚಿದೆ. ಇಂದು ಅಮೆರಿಕ ವಿಶ್ವದ ನಂಬರ್ ಒನ್ ರಾಷ್ಟ್ರವಾಗಿರಬಹುದು ಆದರೆ ಆ ಯಶಸ್ಸಿನ ಹಿಂದೆ ಭಾರತೀಯ ಶ್ರಮಿಕ ವರ್ಗದ ಪರಿಶ್ರಮವಿದೆ.
ಸಂಶೋಧನೆ, ವೈದ್ಯಕೀಯ, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್, ವೃತ್ತಿಪರ, ಉತ್ಪಾದನೆ, ಸೇಲ್ಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತೀಯರೇ ಮಂಚೂಣಿಯಲ್ಲಿದ್ದು, ಅಮೆರಿಕದ ಮುನ್ನಡೆಗೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲ ಅಮೆರಿಕದಲ್ಲಿರುವ ಭಾರತೀಯರು ಅಭಿಯಾನಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ಸಮೂಹದ ಬಲಪದರ್ಶನವನ್ನು ಅಮೆರಿಕದ ರಾಜಕೀಯ ವಲಯಕ್ಕೆ ತೋರಿಸಿದೆ. ಭಾರತೀಯ ಮೂಲದವರನ್ನು ಕಡೆಗಣಿಸಲಾಗದು ಎಂಬ ಅರಿವು ಅಲ್ಲಿನ ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ತಿಳಿದಿದೆ. 2016ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಗೆಲ್ಲಲು ಭಾರತೀಯ ಸಮೂಹವೇ ಕಾರಣ ಎಂಬುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಹಾಗಾಗಿ ಈ ಬಾರಿ ಭಾರತೀಯ ಮೂಲದ ಮತದಾರರ ಮನಗೆಲ್ಲಲು ಎರಡು ಪಕ್ಷಗಳು ಪೈಪೋಟಿ ನಡೆಸುತ್ತಿವೆ.